Arca da aliança
A Arca da Aliança era o símbolo mais sagrado de Israel — representava a presença de Deus no meio do seu povo. Sobre ela brilhava a glória do Senhor entre os querubins.
ಒಡಂಬಡಿಕೆಯ ಪೆಟ್ಟಿಗೆ
"ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವು ಹಾಗೂ ಒಂದುವರೆ ಮೊಳ ಎತ್ತರವು ಆಗಿರಬೇಕು. ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಹಾಗೂ ಒಳಗಡೆಯೂ ಹೊದಿಸಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು. ನಾಲ್ಕು ಬಂಗಾರದ ಬಳೆಗಳನ್ನು ಅದರ ನಾಲ್ಕು ಮೂಲೆಗಳಲ್ಲಿರುವ ಒಂದೊಂದು ಕಾಲಿಗೂ ಎರಡೆರಡು ಬಳೆಗಳನ್ನು ಹಾಕಬೇಕು. ಆ ಮಂಜೂಷವನ್ನು ಹೊರುವುದಕ್ಕಾಗಿ ನೀನು ಜಾಲೀಮರದ ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ, ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. ಆ ಕಂಬಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೇ ಅವುಗಳಲ್ಲಿಯೇ ಬಿಟ್ಟಿರಬೇಕು. ಆ ಮಂಜೂಷದಲ್ಲಿ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು. ಚೊಕ್ಕ ಬಂಗಾರದ ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿರಬೇಕು. ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು. ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಬೇಕು. ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಮತ್ತು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿರುವಂತೆಯೂ ಇರಿಸಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುವಂತಿರಬೇಕು. ಆ ಕೃಪಾಸನವನ್ನು ಮಂಜೂಷದ ಮೇಲಿರಿಸಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇರಿಸಬೇಕು
ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತನಾಡಿ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.
ಆಜ್ಞಾಶಾಸನಗಳ ಪೆಟ್ಟಿಗೆ
ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿದನು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ ಹಾಗೂ ಒಂದುವರೆ ಮೊಳ ಎತ್ತರವೂ ಆಗಿತ್ತು.
ದೇವದರ್ಶನ ಗುಡಾರದ ಪ್ರತಿಷ್ಠೆ
ಆಗ ಯೆಹೋವನು ಮೋಶೆಗೆ, "ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ದೇವದರ್ಶನದ ಗುಡಾರವನ್ನು ತೆರೆಯಬೇಕು. ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.
ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು. ಮೋಶೆಯು ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ಪರದೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.
ಮೋಶೆ ಯೆಹೋವನ ಸಂಗಡ ಮಾತನಾಡಬೇಕೆಂದು ದೇವದರ್ಶನದ ಗುಡಾರದೊಳಗೆ ಹೋದಾಗ ಆಜ್ಞಾಶಾಸನಗಳ ಮಂಜೂಷದ ಮೇಲಣ ಕೃಪಾಸನದ ಮೇಲಿನಿಂದ ಆ ಎರಡು ಕೆರೂಬಿಗಳ ನಡುವೆಯಿಂದ ತನ್ನ ಸಂಗಡ ಮಾತನಾಡುವ ಯೆಹೋವನ ಸ್ವರವು ಅವನಿಗೆ ಕೇಳಿಸಿತು. ಹೀಗೆ ಯೆಹೋವನು ಮೋಶೆಯ ಸಂಗಡ ಮಾತನಾಡಿದನು.
ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು. ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇರುತ್ತಿತ್ತು.
ಯೆಹೋವನ ಮಂಜೂಷ ಪೆಟ್ಟಿಗೆಯು ಹೊರಡುವಾಗ ಮೋಶೆ,
"ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಶತ್ರುಗಳು ಬೆನ್ನು ತೋರಿಸಿ ಓಡಿಹೋಗಲಿ" ಎಂದು ಹೇಳುವನು.
ಅದು ನಿಂತಾಗ ಅವನು,
"ಯೆಹೋವನೇ, ಇಸ್ರಾಯೇಲರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ಮರಳಿ ಆಗಮಿಸು" ಎಂದು ಹೇಳುವನು.
ಯೆಹೋವನು ಆರೋನನ ಕೋಲನ್ನು ಚಿಗುರಿಸಿದ್ದು
ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, "ನೀನು ಇಸ್ರಾಯೇಲರ ಸಂಗಡ ಮಾತನಾಡಿ, ‘ಅವರ ಪೂರ್ವಿಕರ ಒಂದೊಂದು ಕುಲದ ಅಧಿಪತಿಯಿಂದ ಗೋತ್ರಗಳ ಪ್ರಕಾರವಾಗಿ ಒಂದೊಂದು ಕೋಲುಗಳನ್ನು ತೆಗೆದುಕೊಳ್ಳಬೇಕು. ಗೋತ್ರಗಳ ಪ್ರಕಾರವಾಗಿ ಒಬ್ಬೊಬ್ಬ ಪ್ರಧಾನರ ಹೆಸರಿನಲ್ಲಿ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಅವರ ಹೆಸರನ್ನು ಬರೆಯಿಸಬೇಕು. ಲೇವಿ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸಬೇಕು ಏಕೆಂದರೆ ಅವರ ಪೂರ್ವಿಕರ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು. ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು. ನಾನು ಯಾರನ್ನು ಆಯ್ದುಕೊಳ್ಳುತ್ತೇನೋ ಅವನ ಕೋಲು ಚಿಗುರುವುದು. ಇಸ್ರಾಯೇಲರು ನಿಮ್ಮಿಬ್ಬರ ವಿರುದ್ಧವಾಗಿ ಗುಣುಗುಟ್ಟುವುದನ್ನು ನಾನು ನಿಲ್ಲಿಸಿ ಬಿಡುವೆನು’" ಎಂದನು.
ಅದಕ್ಕೆ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲೂ ಇತ್ತು. ಮೋಶೆ ಆ ಕೋಲುಗಳನ್ನು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇಟ್ಟನು. ಮರುದಿನ ಮೋಶೆಯು ಆಜ್ಞಾಶಾಸನಗಳಿರುವ ಗುಡಾರದಲ್ಲಿ ಹೋಗಿ ನೋಡಲಾಗಿ ಅಗೋ, ಲೇವಿ ಕುಲಕ್ಕೋಸ್ಕರ ಆರೋನನಿಗೆ ಕೊಟ್ಟಿದ್ದ ಕೋಲು ಚಿಗುರಿ, ಮೊಗ್ಗುಬಿಟ್ಟು ಹೂವಾಗಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು! ಮೋಶೆ ಆ ಕೋಲುಗಳನ್ನೆಲ್ಲಾ ಯೆಹೋವನ ಸನ್ನಿಧಿಯಿಂದ ಇಸ್ರಾಯೇಲರ ಬಳಿಗೆ ತಂದು ತೋರಿಸಿದನು. ಅವರು ನೋಡಿ ತಮ್ಮತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು.
ತರುವಾಯ ಯೆಹೋವನು ಮೋಶೆಗೆ, "ಆರೋನನ ಕೋಲನ್ನು ತಿರುಗಿ ಆಜ್ಞಾಶಾಸನಗಳ ಮುಂದೆ ಇಡಬೇಕು. ಅದು ತಿರುಗಿಬೀಳುವವರಿಗೆ ದೃಷ್ಟಾಂತವಾಗಿ ಅಲ್ಲೇ ಇರಬೇಕು. ಇವರು ಇನ್ನು ಮುಂದೆ ನನಗೆ ವಿರುದ್ಧವಾಗಿ ಗುಣುಗುಟ್ಟಿ ನಾಶವಾಗದಂತೆ ನೀನು ಹೀಗೆ ಮಾಡು" ಎಂದು ಆಜ್ಞಾಪಿಸಿದನು. ಯೆಹೋವನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.
ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು. ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.
ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ನದಿಯು ದಡಮೀರಿ ಹರಿಯಿತು.
ಯೆರಿಕೋವಿನ ಪತನ
ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ. ಆಗ ಯೆಹೋವನು ಯೆಹೋಶುವನಿಗೆ "ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಹಾಗೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ. ನಿನ್ನ ಭಟರೆಲ್ಲ ಆರು ದಿನಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿನ ನೀವು ಪಟ್ಟಣವನ್ನು ಏಳು ಸಾರಿ ಸುತ್ತಬೇಕು; ಯಾಜಕರು ಕೊಂಬುಗಳನ್ನು ಊದಬೇಕು. ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಗಟ್ಟಿಯಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವುದು; ಪ್ರತಿಯೊಬ್ಬನೂ ನೆಟ್ಟಗೆ ಒಳಗೆ ನುಗ್ಗಬಹುದು" ಎಂದು ಹೇಳಿದನು.
ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, "ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ" ಎಂದನು. ಮತ್ತು ಅವನು ಜನರಿಗೆ "ನೀವು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ" ಎಂದು ಹೇಳಿದನು.
ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಗಟ್ಟಿಯಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ವಶವಾಯಿತು.
ಇವರು ಇಸ್ರಾಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧಮಾಡಲು ಇಸ್ರಾಯೇಲರು ಸೋತರು; ಫಿಲಿಷ್ಟಿಯರು ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಾಯೇಲರನ್ನು ಸಂಹರಿಸಿದರು. ಇಸ್ರಾಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರ ಹಿರಿಯರು ಅವರಿಗೆ, "ಯೆಹೋವನು ಈ ಹೊತ್ತು ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ತಪ್ಪಿಸಲಿ" ಎಂದು ಆಲೋಚನೆ ಹೇಳಿದ್ದರಿಂದ ಅವರು ಜನರನ್ನು ಕಳುಹಿಸಿ ಕೆರೂಬಿಗಳ ಮಧ್ಯದಲ್ಲಿ ಆಸೀನನಾಗಿರುವ ಸೇನಾಧೀಶ್ವರ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು. ಯೆಹೋವನ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇಲ್ಯರೆಲ್ಲಾ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು. ಫಿಲಿಷ್ಟಿಯರು ಇದನ್ನು ಕೇಳಿ, "ಇಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೇನು ಕಾರಣ" ಎಂದು ವಿಚಾರಿಸುವಲ್ಲಿ ಯೆಹೋವನ ಮಂಜೂಷವು ಪಾಳೆಯದಲ್ಲಿ ಬಂದದ್ದೇ ಕಾರಣವೆಂದು ತಿಳಿದುಕೊಂಡರು. ದೇವರು ಇವರ ಪಾಳೆಯಕ್ಕೆ ಬಂದಿದ್ದಾನಲ್ಲಾ ಎಂದು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟು, "ಅಯ್ಯೋ! ಮುಂಚೆ ಹೀಗಾಗಿರಲ್ಲಿಲ್ಲ. ಅಯ್ಯೋ! ಪರಾಕ್ರಮವುಳ್ಳ ಈ ದೇವರ ಕೈಯಿಂದ ನಮ್ಮನ್ನು ಬಿಡಿಸುವವರು ಯಾರು? ಐಗುಪ್ತ್ಯರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೋ! ಫಿಲಿಷ್ಟಿಯರೇ, ಬಲಗೊಳ್ಳಿರಿ, ಶೂರರಾಗಿರಿ; ನಿಮಗೆ ದಾಸರಾಗಿದ್ದ ಇಬ್ರಿಯರಿಗೆ ನೀವೇ ದಾಸರಾದೀರಿ. ಆದಕಾರಣ ಶೌರ್ಯದಿಂದ ಯುದ್ಧಮಾಡಬೇಕು" ಎಂದು ಹೇಳಿಕೊಂಡು ಫಿಲಿಷ್ಟಿಯರು ಯುದ್ಧಮಾಡಲು ಇಸ್ರಾಯೇಲರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾ ಸಂಹಾರವಾಯಿತು; ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷವು ಶತ್ರುವಶವಾಯಿತು; ಏಲಿಯ ಮಕ್ಕಳಾದ ಹೊಫ್ನಿಯೂ ಮತ್ತು ಫೀನೆಹಾಸನೂ ಹತರಾದರು.
ಯೆಹೋವನ ಹಸ್ತವು ಅಷ್ಡೋದಿನವರಿಗೆ ಬಾಧಕವಾಗಿತ್ತು; ಆತನು ಆ ನಗರದಲ್ಲಿಯೂ, ಅದರ ಗ್ರಾಮಗಳಲ್ಲಿಯೂ ಗಡ್ಡೆ ರೋಗವನ್ನು ಬರಮಾಡಿ ಅವರನ್ನು ನಾಶಮಾಡಿದನು. ಅಷ್ಡೋದಿನ ಜನರು ಅದನ್ನು ನೋಡಿ, "ಇಸ್ರಾಯೇಲಿನ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಏಕೆಂದರೆ ಆತನ ಹಸ್ತವು ನಮಗೂ, ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ" ಎಂದು ಹೇಳಿ ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ, "ಇಸ್ರಾಯೇಲಿನ ದೇವರ ಮಂಜೂಷವನ್ನು ಏನು ಮಾಡೋಣ?" ಎಂದು ಕೇಳಲು ಅವರು, "ಅದನ್ನು ಗತ್ ಊರಿಗೆ ಕಳುಹಿಸಿ ಕೊಡಬೇಕೆಂದು ನಿರ್ಣಯಿಸಿದರು." ಅವರು ಹಾಗೆಯೇ ಇಸ್ರಾಯೇಲಿನ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು. ಮಂಜೂಷವು ಅಲ್ಲಿ ಹೋದ ಮೇಲೆ ಯೆಹೋವನ ಹಸ್ತವು ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲವಾಯಿತು. ಯೆಹೋವನು ಊರಿನ ಚಿಕ್ಕವರಲ್ಲಿಯೂ, ದೊಡ್ಡವರಲ್ಲಿಯೂ ಗಡ್ಡೆಗಳನ್ನು ಬರಮಾಡಿದನು. ಆದ್ದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, "ನೋಡಿರಿ, ನಮ್ಮನ್ನೂ, ನಮಗೆ ಸೇರಿದವರನ್ನೂ ಕೊಲ್ಲುವುದಕ್ಕೋಸ್ಕರ ಇಸ್ರಾಯೇಲಿನ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ" ಎಂದು ಕೂಗಿಕೊಂಡರು. ದೇವರ ಹಸ್ತವು ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ ಅವರಿಗೆ, "ಇಸ್ರಾಯೇಲಿನ ದೇವರ ಮಂಜೂಷವನ್ನು ಹಾಗೆಯೇ ಅದರ ಸ್ಥಳಕ್ಕೆ ಕಳುಹಿಸಿಬಿಡಿರಿ" ಅಂದರು.
ಫಿಲಿಷ್ಟಿಯರು ದೇವರ ಮಂಜೂಷವನ್ನು ಹಿಂದಕ್ಕೆ ಕಳುಹಿಸಿದ್ದು
ಯೆಹೋವನ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳ ಕಾಲ ಇತ್ತು. ನಂತರ ಫಿಲಿಷ್ಟಿಯರು ಪೂಜಾರಿಗಳನ್ನೂ, ಕಣಿಹೇಳುವವರನ್ನೂ ಕರೆದು ಅವರಿಗೆ, "ಯೆಹೋವನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಪುನಃ ಅದರ ಸ್ಥಳಕ್ಕೆ ಹೇಗೆ ಕಳುಹಿಸಬೇಕು ತಿಳಿಸಿರಿ" ಅನ್ನಲು ಅವರು, "ನೀವು ಇಸ್ರಾಯೇಲಿನ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು. ಪ್ರಾಯಶ್ಚಿತ್ತದ್ರವ್ಯದೊಡನೆ ಕಳುಹಿಸಿದರೆ ಮಾತ್ರ ಗುಣಹೊಂದುವಿರಿ. ಆತನ ಶಿಕ್ಷಾಹಸ್ತವು ನಿಮ್ಮನ್ನು ಬಾಧಿಸುತ್ತಿರುವುದಕ್ಕೆ ಕಾರಣವು ಗೊತ್ತಾಗುವುದು" ಎಂದು ಹೇಳಿದರು.
ಅದೇ ಪ್ರಕಾರ ಫಿಲಿಷ್ಟಿಯರು ಹಾಲುಕರೆಯುವ ಎರಡು ಹಸುಗಳನ್ನು ಹಿಡಿದುಕೊಂಡು ಬಂಡಿಗೆ ಹೂಡಿ ಅವುಗಳ ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿದರು. ಯೆಹೋವನ ಮಂಜೂಷವನ್ನೂ, ಚಿನ್ನದ ಇಲಿಗಳೂ, ಗಡ್ಡೆಗಳೂ ಇದ್ದ ಚಿಕ್ಕ ಪೆಟ್ಟಿಗೆಯನ್ನೂ ಬಂಡಿಯ ಮೇಲಿಟ್ಟರು. ಕೂಡಲೆ ಆ ಹಸುಗಳು ಬೇತ್ ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಕೂಗುತ್ತಾ ನೆಟ್ಟಗೆ ಮುಂದೆ ನಡೆದವು; ಎಡಬಲಕ್ಕೆ ತಿರುಗಲಿಲ್ಲ. ಫಿಲಿಷ್ಟಿಯ ಪ್ರಭುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು. ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ಯೆಹೋವನ ಮಂಜೂಷವನ್ನು ನೋಡಿ ಬಹು ಸಂತೋಷಪಟ್ಟರು. ಬಂಡಿಯು ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ದೊಡ್ಡ ಕಲ್ಲಿನ ಬಳಿಯಲ್ಲಿ ಬಂದು ನಿಂತಿತು. ಆಗ ಅವರು ಹೋಗಿ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಆ ಹಸುಗಳನ್ನು ಯೆಹೋವನಿಗೆ ಯಜ್ಞಮಾಡಿದರು. ಲೇವಿಯರು ಯೆಹೋವನ ಮಂಜೂಷವನ್ನೂ, ಚಿನ್ನದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್ ಷೆಮೆಷಿನವರು ಅದೇ ದಿನ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಮತ್ತು ಯಜ್ಞಗಳನ್ನೂ ಸಮರ್ಪಿಸಿದರು.
ಆಗ ಕಿರ್ಯತ್ಯಾರೀಮಿನವರು ಬಂದು ಯೆಹೋವನ ಮಂಜೂಷವನ್ನು ತೆಗೆದುಕೊಂಡು ಹೋಗಿ, ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿಟ್ಟು, ಅವನ ಮಗನಾದ ಎಲ್ಲಾಜಾರನನ್ನು ಅದರ ಸೇವೆಗೋಸ್ಕರ ಪ್ರತಿಷ್ಠಿಸಿದರು.
ಇಸ್ರಾಯೇಲ್ಯರು ದೇವರ ಕಡೆಗೆ ತಿರುಗಿಕೊಂಡದ್ದು; ಫಿಲಿಷ್ಟಿಯರು ಅಪಜಯಹೊಂದಿದ್ದು
ಮಂಜೂಷವು ಕಿರ್ಯಾತ್ಯಾರೀಮಿಗೆ ಬಂದು ಬಹಳ ದಿನಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದು ಹೋದವು. ಈ ಕಾಲದಲ್ಲಿ ಎಲ್ಲಾ ಇಸ್ರಾಯೇಲ್ಯರು ದುಃಖಿಸುತ್ತಾ ಯೆಹೋವನ ಕಡೆಗೆ ತಿರುಗಿಕೊಳ್ಳಲು ಹಂಬಲಿಸುತ್ತಿದ್ದರು.
ಯೆಹೋವನು ಹೀಗೆ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ, ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸಾಹದಿಂದ ದಾವೀದನಗರಕ್ಕೆ ತಂದನು. ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ, ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು. ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ, ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು. ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲರೂ ಅರ್ಭಟಿಸುತ್ತಾ, ತುತ್ತೂರಿ ಊದುತ್ತಾ, ಯೆಹೋವನ ಮಂಜೂಷವನ್ನು ತಂದರು.
ಮಂಜೂಷವನ್ನು ದೇವಾಲಯಕ್ಕೆ ತಂದದ್ದು ಮತ್ತು ಪ್ರತಿಷ್ಠಾಪಿಸಿದ್ದು
ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು. ಇಸ್ರಾಯೇಲರೆಲ್ಲರೂ ಏಳನೆಯ ತಿಂಗಳಾದ ಆಶ್ವೀಜ ಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು. ಇಸ್ರಾಯೇಲರ ಎಲ್ಲಾ ಹಿರಿಯರು ಒಟ್ಟಾಗಿ ಬಂದಾಗ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು. ಉಳಿದ ಯಾಜಕರೂ ಮತ್ತು ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತುಕೊಂಡರು. ಅರಸನಾದ ಸೊಲೊಮೋನನು ಅಲ್ಲಿ ಕೂಡಿ ಬಂದಿದ್ದ ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಯಜ್ಞಮಾಡಿದರು. ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು. ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇವೆ. ಮಂಜೂಷದಲ್ಲಿ ಎರಡು ಕಲ್ಲಿನ ಹಲಿಗೆಗಳ ಹೊರತಾಗಿ ಬೇರೇನೂ ಇರಲಿಲ್ಲ. ಯೆಹೋವನು ಐಗುಪ್ತದಿಂದ ಬಂದ ಇಸ್ರಾಯೇಲರೊಡನೆ ಹೋರೇಬ್ ಬೆಟ್ಟದ ಬಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿರಿಸಿದನು. ಯಾಜಕರು ಪರಿಶುದ್ಧ ಸ್ಥಳದಿಂದ ಹೊರಗೆ ಬಂದ ಕೂಡಲೆ ಮೇಘವು ಯೆಹೋವನ ಆಲಯವನ್ನು ತುಂಬಿಕೊಂಡಿತು. ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡ ಮೇಘವು ಆಲಯವನ್ನು ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲು ಆಗಲಿಲ್ಲ.
ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ. ಒಂದು ಪಟ್ಟಣಕ್ಕೆ ಒಬ್ಬನಂತೆಯೂ, ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರೆತರುವೆನು.
ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನ ಮತ್ತು ವಿವೇಕಗಳಿಂದ ಪೋಷಿಸುವರು.
ನೀವು ದೇಶದಲ್ಲಿ ಹೆಚ್ಚಿ ಅಭಿವೃದ್ಧಿಗೆ ಬಂದ ಕಾಲದಲ್ಲಿ, ‘ಯೆಹೋವನ ನಿಬಂಧನ ಮಂಜೂಷ’ ಇದರ ಪ್ರಸ್ತಾವವಿರದು. ಅದು ಜ್ಞಾಪಕಕ್ಕೆ ಬಾರದು, ಯಾರೂ ಸ್ಮರಿಸರು, ಅದು ಇಲ್ಲವಲ್ಲಾ ಎಂದು ದುಃಖಿಸರು, ಹೊಸದಾಗಿ ಕಲ್ಪಿಸಿಕೊಳ್ಳರು" ಇದು ಯೆಹೋವನ ನುಡಿ.
ಭೂಲೋಕದ ಮತ್ತು ಪರಲೋಕದ ಆಲಯ
ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ ದೇವಾಲಯವಿತ್ತು. ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು. ಮತ್ತು ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು. ಅದರಲ್ಲಿ ಚಿನ್ನದ ಧೂಪಾರತಿಯು ಮತ್ತು ಚಿನ್ನದ ತಗಡಿನಿಂದ ಹೊದಿಸಿದ ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ ಚಿನ್ನದ ಪಾತ್ರೆಯೂ, ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು. ಅದರ ಮೇಲೆ ಕೃಪಾಸನವನ್ನು ಮುಚ್ಚುವ ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.