Arca da aliança
A Arca da Aliança era o símbolo mais sagrado de Israel — representava a presença de Deus no meio do seu povo. Sobre ela brilhava a glória do Senhor entre os querubins.
"ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು. ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿಸಬೇಕು. ಅದಕ್ಕೆ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು. ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು. ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯಬಾರದು. ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.
"ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು. ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು. ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು. ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು. ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು.
ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.
ಬೆಚಲಯೇಲನು ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, "ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು. ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು.
ಅವನು ಆಜ್ಞಾಶಾಸನಗಳನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿಟ್ಟು, ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ, ಮಂಜೂಷದ ಮೇಲೆ ಕರುಣಾಸನವನ್ನು ಇಟ್ಟನು. ಅವನು ಮಂಜೂಷವನ್ನು ಗುಡಾರಕ್ಕೆ ತಂದು, ಮರೆಮಾಡುವ ಪರದೆಯನ್ನಿರಿಸಿ, ಒಡಂಬಡಿಕೆಯ ಮಂಜೂಷವನ್ನು ಮರೆಮಾಡಿದನು. ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಮೋಶೆಯು ಮಾಡಿದನು.
ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.
ಅವರು ಯೆಹೋವ ದೇವರ ಪರ್ವತದ ಬಳಿಯಿಂದ ಮೂರು ದಿವಸಗಳವರೆಗೆ ಪ್ರಯಾಣಮಾಡಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಅವರಿಗೆ ಇಳಿದುಕೊಳ್ಳುವ ಸ್ಥಳವನ್ನು ಹುಡುಕುವುದಕ್ಕೆ ಅವರ ಮೂರು ದಿವಸಗಳ ಪ್ರಯಾಣದಲ್ಲಿ ಅವರ ಮುಂದಾಗಿ ಹೋಯಿತು. ಅವರು ಪಾಳೆಯದಿಂದ ಹೊರಟಾಗ, ಯೆಹೋವ ದೇವರ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು.
ಇದಲ್ಲದೆ ಮಂಜೂಷವು ಹೊರಡುವಾಗ ಮೋಶೆಯು ಹೀಗೆ ಹೇಳುತ್ತಿದ್ದನು,
"ಯೆಹೋವ ದೇವರೇ, ಎದ್ದೇಳಿರಿ,
ನಿಮ್ಮ ಶತ್ರುಗಳು ಚದರಿಹೋಗಲಿ.
ನಿಮ್ಮನ್ನು ಹಗೆ ಮಾಡುವವರು ನಿಮ್ಮ ಎದುರಿನಿಂದ ಓಡಿಹೋಗಲಿ."
ಮಂಜೂಷವು ನಿಂತಾಗ ಅವನು ಹೀಗೆ ಹೇಳುತ್ತಿದ್ದನು,
"ಯೆಹೋವ ದೇವರೇ,
ಸಾವಿರಾರು ಇಸ್ರಾಯೇಲರ ಕುಟುಂಬಗಳ ಬಳಿಗೆ ಹಿಂದಿರುಗು."
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, "ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಗೋತ್ರಗಳ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ ಕೋಲುಗಳನ್ನು ತೆಗೆದುಕೊಂಡು, ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ನೀನು ಬರೆ. ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಏಕೆಂದರೆ ಅವರ ಪಿತೃಗಳ ಗೋತ್ರದ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು. ಅವುಗಳನ್ನು ದೇವದರ್ಶನ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಒಡಂಬಡಿಕೆಯ ಮಂಜೂಷದ ಮುಂದೆ ಇಡಬೇಕು. ನಾನು ಯಾವನನ್ನು ಆಯ್ದುಕೊಳ್ಳುತ್ತೇನೋ, ಆ ಮನುಷ್ಯನ ಕೋಲು ಚಿಗುರುವುದು. ಹೀಗೆ ಇಸ್ರಾಯೇಲರು ನಿಮಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ನಿಲ್ಲಿಸಿಬಿಡುವೆನು," ಎಂದರು.
ಹಾಗೆಯೇ ಮೋಶೆಯು ಇಸ್ರಾಯೇಲರ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಗೋತ್ರಗಳ ಪ್ರಕಾರ ಒಬ್ಬೊಬ್ಬ ಪ್ರಧಾನನಿಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರದ ಒಳಗೆ ಯೆಹೋವ ದೇವರ ಸಮ್ಮುಖದಲ್ಲಿ ಇಟ್ಟನು.
ಮರುದಿವಸದಲ್ಲಿ, ಮೋಶೆಯು ಸಾಕ್ಷಿ ಗುಡಾರದೊಳಗೆ ಪ್ರವೇಶಿಸುವಾಗ, ಲೇವಿಯ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ, ಮೊಗ್ಗು ಬಿಟ್ಟು, ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಆಗ ಮೋಶೆಯು ಕೋಲುಗಳನ್ನು ಯೆಹೋವ ದೇವರ ಸನ್ನಿಧಿಯಿಂದ ಎಲ್ಲಾ ಇಸ್ರಾಯೇಲರಿಗೆ ತೋರಿಸುವುದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲುಗಳನ್ನು ತೆಗೆದುಕೊಂಡರು.
ಯೆಹೋವ ದೇವರು ಮೋಶೆಗೆ, "ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಇಟ್ಟುಕೊಳ್ಳುವುದಕ್ಕೆ ಒಡಂಬಡಿಕೆಯ ಮಂಜೂಷದ ಮುಂದೆ ತಿರುಗಿ ಇಡು. ಗೊಣಗುಟ್ಟುವುದನ್ನು ನೀನು ಸಂಪೂರ್ಣವಾಗಿ ತೆಗೆದುಬಿಡಬೇಕು," ಎಂದರು. ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರವೇ ಮೋಶೆ ಮಾಡಿದನು.
ಆದ್ದರಿಂದ ಜನರು ಯೊರ್ದನ್ ನದಿಯನ್ನು ದಾಟಲು ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಜನರಿಗೆ ಮುಂದಾಗಿ ಹೊತ್ತುಕೊಂಡು ಹೋದರು. ಎಂದಿನಂತೆ ಯೊರ್ದನ್ ನದಿಯು ಸುಗ್ಗಿಕಾಲದಲ್ಲಿ ದಡ ತುಂಬಿ ಹರಿಯುತ್ತಾ ಇತ್ತು. ಮಂಜೂಷವನ್ನು ಹೊರುವ ಯಾಜಕರ ಕಾಲುಗಳು ನೀರಿನ ಅಂಚಿನಲ್ಲಿ ಇಡುತ್ತಲೇ, ಮೇಲಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಸಮೀಪವಾಗಿದ್ದ ಆದಾಮ್ ಪಟ್ಟಣಕ್ಕೆ ಬಂದು ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ಎಂಬ ಲವಣ ಸಮುದ್ರಕ್ಕೆ ಹರಿದುಹೋಯಿತು. ಆಗ ಜನರು ಯೆರಿಕೋವಿನ ಎದುರಾಗಿ ನದಿ ದಾಟಿದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿಯ ಮಧ್ಯದಲ್ಲಿ ಒಣನೆಲದಲ್ಲಿ ದೃಢವಾಗಿ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲರೆಲ್ಲರೂ ಒಣನೆಲದ ಮೇಲೆ ನಡೆದರು. ಹೀಗೆ ಇಡೀ ರಾಷ್ಟ್ರವು ಯೊರ್ದನ್ ನದಿ ಆಚೆ ಸೇರಿತು.
ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನ್ ನದಿ ಮಧ್ಯದಲ್ಲಿಂದ ಏರಿ, ತಮ್ಮ ಅಂಗಾಲುಗಳನ್ನು ಒಣನೆಲದ ಮೇಲೆ ಇಟ್ಟಕೂಡಲೇ ನೀರು ಮುಂಚಿನಂತೆ ಬಂದು ಯೊರ್ದನ್ ನದಿಯ ದಡ ತುಂಬಿ ಹರಿಯಿತು.
ಆಗ ಯೆರಿಕೋವಿನ ಜನರು ಇಸ್ರಾಯೇಲರ ನಿಮಿತ್ತವಾಗಿ, ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದರು.
ಆಗ ಯೆಹೋವ ದೇವರು ಯೆಹೋಶುವನಿಗೆ, "ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧ ವೀರರನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣವನ್ನು ಒಂದು ಸಾರಿ ಸುತ್ತಬೇಕು. ಈ ಪ್ರಕಾರ ಆರು ದಿವಸ ಮಾಡಬೇಕು. ಏಳುಮಂದಿ ಯಾಜಕರು ಹೊತ್ತುಕೊಂಡಿದ್ದ ಮಂಜೂಷದ ಮುಂದೆ ಟಗರುಗಳ ಏಳು ಕೊಂಬುಗಳ ತುತೂರಿಗಳನ್ನು ಹಿಡಿದುಕೊಂಡು ಹೋಗಬೇಕು. ಆದರೆ ಅವರು ಏಳನೆಯ ದಿವಸ ಪಟ್ಟಣವನ್ನು ಏಳು ಸಾರಿ ಸುತ್ತಿ ಬರಬೇಕು. ಯಾಜಕರು ತುತೂರಿಗಳನ್ನು ಊದಬೇಕು. ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು," ಎಂದು ಹೇಳಿದರು.
ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, "ನೀವು ಒಡಂಬಡಿಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ. ಏಳುಮಂದಿ ಯಾಜಕರು ಏಳು ಟಗರು ಕೊಂಬುಗಳ ತುತೂರಿಗಳೊಂದಿಗೆ ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ," ಎಂದನು. ಜನರಿಗೆ, "ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ದರು ಯೆಹೋವ ದೇವರ ಮಂಜೂಷದ ಮುಂದೆ ಹೋಗಲಿ," ಎಂದನು.
ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು.
ಫಿಲಿಷ್ಟಿಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧಮಾಡಿದಾಗ, ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಸೋತರು. ಫಿಲಿಷ್ಟಿಯರು ಯುದ್ಧ ರಂಗದಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರ ಜನರನ್ನು ಹತಮಾಡಿದರು. ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, "ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ," ಎಂದರು.
ಕೆರೂಬಿಗಳ ಮಧ್ಯದಲ್ಲಿರುವ ಸೇನಾಧೀಶ್ವರ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬರಲು ಶೀಲೋವಿಗೆ ಜನರನ್ನು ಕಳುಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು.
ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ, ಇಸ್ರಾಯೇಲರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು. ಅವರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿದಾಗ, "ಹಿಬ್ರಿಯರ ಪಾಳೆಯದ ಈ ಮಹಾ ಆರ್ಭಟವೇನು?" ಎಂದು ವಿಚಾರಿಸಿದರು.
ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳಿದುಕೊಂಡರು. "ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!" ಎಂದುಕೊಂಡು, ಫಿಲಿಷ್ಟಿಯರು ಭಯಪಟ್ಟು, ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ. ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವರ್ಯಾರು? ಈಜಿಪ್ಟಿನವರನ್ನು ಮರುಭೂಮಿಯಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ. ಫಿಲಿಷ್ಟಿಯರೇ, ನೀವು ಬಲಗೊಂಡು ಶೂರರಾಗಿರಿ. ಹಿಬ್ರಿಯರು ನಿಮಗೆ ಗುಲಾಮರಾಗಿ ಮಾಡಿದ ಪ್ರಕಾರ ನೀವು ಅವರಿಗೆ ಗುಲಾಮರಾಗದ ಹಾಗೆ ಶೂರರಾಗಿ ಇದ್ದು, ಯುದ್ಧಮಾಡಿರೆಂದು ಹೇಳಿಕೊಂಡರು.
ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲರು ಸೋತು, ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾ ಸಂಹಾರವಾಯಿತು. ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಮರಣಹೊಂದಿದರು.
ಯೆಹೋವ ದೇವರ ಕೈ ಅಷ್ಡೋದಿನವರ ಮೇಲೆ ಮಹಾ ಭಾರವಾಗಿತ್ತು. ಅವರನ್ನು ನಾಶಮಾಡಿ, ಅಷ್ಡೋದನ್ನೂ, ಅದರ ಮೇರೆಗಳನ್ನೂ ಗಡ್ಡೆರೋಗದಿಂದಲೂ ಬಾಧಿಸಿದರು. ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ಕಂಡಾಗ, "ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು. ಏಕೆಂದರೆ ಅವರ ಕೈ ನಮ್ಮ ಮೇಲೆಯೂ, ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ," ಎಂದರು. ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೆಯಕಳುಹಿಸಿ ಅವರಿಗೆ, "ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?" ಎಂದರು. ಅದಕ್ಕವರು, "ಇಸ್ರಾಯೇಲ್ ದೇವರ ಮಂಜೂಷವು ಗತ್ ಊರಿಗೆ ಕಳುಹಿಸಬೇಕು," ಎಂದರು.
ಅವರು ಇಸ್ರಾಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.
ಆದರೆ ಅವರು ಅದನ್ನು ತಂದ ತರುವಾಯ, ಯೆಹೋವ ದೇವರ ಕೈ ಆ ಪಟ್ಟಣದ ಮೇಲೆ ಬಂದು ಮಹಾ ನಾಶಮಾಡಿತು. ಇದಲ್ಲದೆ ಯೆಹೋವ ದೇವರು ಚಿಕ್ಕವರಿಂದ ಹಿರಿಯರವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದರು. ಅವರಿಗೆ ಗಡ್ಡೆರೋಗ ಬಂದಿತು. ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು.
ದೇವರ ಮಂಜೂಷವು ಎಕ್ರೋನಿಗೆ ಬಂದಾಗ, ಎಕ್ರೋನ್ಯರು, "ನಮ್ಮನ್ನೂ, ನಮ್ಮ ಜನರನ್ನೂ ಕೊಂದುಹಾಕಬೇಕೆಂದು ಇಸ್ರಾಯೇಲ್ ದೇವರ ಮಂಜೂಷವನ್ನು ನಮ್ಮ ಬಳಿಗೆ ತಂದರು," ಎಂದು ಕೂಗಿ ಹೇಳಿದರು. ಆಗ ಆ ಇಡೀ ಪಟ್ಟಣಕ್ಕೆ ಮರಣಾಂತಿಕ ವಿನಾಶ ಉಂಟಾಗಿ, ದೇವರ ಕೈ ಅಲ್ಲಿ ಮಹಾಬಾಧಕವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟುಗೂಡಿಸಿ, "ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ, ನಮ್ಮ ಜನರನ್ನೂ ಕೊಂದು ಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರುಗಿ ಹೋಗುವಂತೆ ಕಳುಹಿಸಿಬಿಡಿರಿ," ಎಂದರು.
ಯೆಹೋವ ದೇವರ ಮಂಜೂಷವು ಫಿಲಿಷ್ಟಿಯರ ಸೀಮೆಯಲ್ಲಿ ಏಳು ತಿಂಗಳು ಇದ್ದ ತರುವಾಯ ಫಿಲಿಷ್ಟಿಯರು ಯಾಜಕರನ್ನೂ ಕಣಿಹೇಳುವವರನ್ನೂ ಕರೆದು, "ಯೆಹೋವ ದೇವರ ಮಂಜೂಷವನ್ನು ನಾವೇನು ಮಾಡಬೇಕು? ನಾವು ಅದನ್ನು ಹೇಗೆ ಅದರ ಸ್ಥಳಕ್ಕೆ ಕಳುಹಿಸುವುದು ನಮಗೆ ತಿಳಿಸಿರಿ," ಎಂದರು.
ಅದಕ್ಕವರು, "ಇಸ್ರಾಯೇಲ್ ದೇವರ ಮಂಜೂಷವನ್ನು ನೀವು ಕಳುಹಿಸಬೇಕಾದರೆ ಅದನ್ನು ಬರಿದಾಗಿ ಕಳುಹಿಸದೆ, ಅದರ ಸಂಗಡ ನಿಶ್ಚಯವಾಗಿ ದೋಷಪರಿಹಾರ ಕಾಣಿಕೆಯನ್ನು ಕಳುಹಿಸಿರಿ, ಆಗ ನೀವು ಸ್ವಸ್ಥರಾಗುವಿರಿ. ಅವರ ಕೈ ನಿಮ್ಮನ್ನು ಬಿಟ್ಟುಹೋಗದೆ ಇರುವ ಕಾರಣ ನಿಮಗೆ ತಿಳಿಯುವುದು," ಎಂದರು.
ಅವರು ಆ ಪ್ರಕಾರವೇ ಎರಡು ಹಾಲು ಕರೆಯುವ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ಬಂಡಿಗೆ ಕಟ್ಟಿ ಅವುಗಳ ಕರುಗಳನ್ನು ಮನೆಯಲ್ಲಿಟ್ಟು ಯೆಹೋವ ದೇವರ ಮಂಜೂಷವನ್ನೂ, ಬಂಗಾರದ ಇಲಿಗಳನ್ನೂ, ತಮ್ಮ ಗಡ್ಡೆರೋಗದ ರೂಪಗಳನ್ನೂ ಇಟ್ಟಿರುವ ಚಿಕ್ಕ ಪೆಟ್ಟಿಗೆಯನ್ನೂ ಆ ಬಂಡಿಯ ಮೇಲಿಟ್ಟರು. ಆಗ ಹಸುಗಳು ಕೂಗುತ್ತಾ ಬೇತ್ ಷೆಮೆಷ್ ಕಡೆಗೆ ಹೋಗುವ ಮಾರ್ಗವನ್ನು ಹಿಡಿದು, ಎಡಕ್ಕಾಗಲಿ, ಬಲಕ್ಕಾಗಲಿ ತಿರುಗದೆ ಹೆದ್ದಾರಿಯಲ್ಲಿ ಹೋದವು. ಫಿಲಿಷ್ಟಿಯರ ಅಧಿಪತಿಗಳು ಬೇತ್ ಷೆಮೆಷ್ ಊರಿನ ಮೇರೆಯವರೆಗೂ ಅವುಗಳ ಹಿಂದೆ ಹೋದರು.
ಬೇತ್ ಷೆಮೆಷ್ ಊರಿನವರು ತಗ್ಗಿನಲ್ಲಿ ಗೋಧಿಯ ಪೈರನ್ನು ಕೊಯ್ಯುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ಎತ್ತಿ ಮಂಜೂಷವನ್ನು ಕಂಡು, ಅದನ್ನು ಕಂಡದ್ದಕ್ಕೆ ಸಂತೋಷಪಟ್ಟರು. ಆ ಬಂಡಿಯು ಬೇತ್ ಷೆಮೆಷ್ ಊರಿನವನಾದ ಯೆಹೋಶುವನ ಹೊಲದಲ್ಲಿ ಬಂದು ನಿಂತಿತು. ಅಲ್ಲಿ ಒಂದು ದೊಡ್ಡ ಬಂಡೆ ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಹಸುಗಳನ್ನು ಯೆಹೋವ ದೇವರಿಗೆ ದಹನಬಲಿಯಾಗಿ ಅರ್ಪಿಸಿದರು. ಲೇವಿಯರು ಯೆಹೋವ ದೇವರ ಮಂಜೂಷವನ್ನೂ, ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳಿದ್ದ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ, ಆ ದೊಡ್ಡ ಬಂಡೆಯ ಮೇಲಿಟ್ಟುಕೊಂಡರು. ಬೇತ್ ಷೆಮೆಷ್ ಊರಿನವರು ಆ ದಿವಸದಲ್ಲಿ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸಮರ್ಪಣೆಗಳನ್ನೂ ಅರ್ಪಿಸಿದರು.
ಕಿರ್ಯತ್ ಯಾರೀಮಿನವರು ಬಂದು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡು, ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟರು. ಅವನ ಪುತ್ರನಾದ ಎಲಿಯಾಜರನನ್ನು ಯೆಹೋವ ದೇವರ ಮಂಜೂಷವನ್ನು ಕಾಯಲು ಪ್ರತಿಷ್ಠಿಸಿದರು. ಮಂಜೂಷವು ಕಿರ್ಯತ್ ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರ್ಷಗಳಾದವು.
ಆಗ, ಇಸ್ರಾಯೇಲ್ ಮನೆತನದವರೆಲ್ಲರು ಯೆಹೋವ ದೇವರಿಗೋಸ್ಕರ ಹಂಬಲಿಸಿ ಗೋಳಾಡುತ್ತಿದ್ದರು.
"ದೇವರ ಮಂಜೂಷದ ನಿಮಿತ್ತ ಯೆಹೋವ ದೇವರು ಓಬೇದ್ ಏದೋಮನ ಮನೆಯನ್ನೂ, ಅವನಿಗೆ ಉಂಟಾದದ್ದೆಲ್ಲವನ್ನೂ ಆಶೀರ್ವದಿಸಿದ್ದಾರೆ," ಎಂದು ಅರಸನಾದ ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು ಹೋಗಿ, ಓಬೇದ್ ಏದೋಮನ ಮನೆಯೊಳಗಿಂದ ದೇವರ ಮಂಜೂಷವನ್ನು ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು. ಯೆಹೋವ ದೇವರ ಮಂಜೂಷವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ, ಅವನು ಎತ್ತುಗಳನ್ನೂ, ಕೊಬ್ಬಿದ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು. ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡು, ತನ್ನ ಪೂರ್ಣಬಲದಿಂದ ಯೆಹೋವ ದೇವರ ಮುಂದೆ ಕುಣಿದಾಡಿದನು. ಈ ಪ್ರಕಾರ ದಾವೀದನೂ, ಇಸ್ರಾಯೇಲರೆಲ್ಲರೂ ಯೆಹೋವ ದೇವರ ಮಂಜೂಷವನ್ನು ಆರ್ಭಟದಿಂದಲೂ, ತುತೂರಿಯ ಶಬ್ದದಿಂದಲೂ ಬರಮಾಡಿದರು.
ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಅರಸನಾದ ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು. ಯಥನಿಮ ತಿಂಗಳಲ್ಲಿ ಹಬ್ಬವಿದ್ದಾಗ, ಇಸ್ರಾಯೇಲಿನ ಸಮಸ್ತ ಜನರು ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು.
ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡು, ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರೂ, ಲೇವಿಯರೂ ಹೊತ್ತುಕೊಂಡು ಬಂದರು. ಆಗ ಅರಸನಾದ ಸೊಲೊಮೋನನೂ, ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು. ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು. ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ. ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ, ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ, ಮೇಘವು ಯೆಹೋವ ದೇವರ ಮಂದಿರವನ್ನು ತುಂಬಿತ್ತು. ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.
"ಓ ಭ್ರಷ್ಟರಾದ ಜನರೇ, ತಿರುಗಿಕೊಳ್ಳಿರಿ," ಎಂದು ಯೆಹೋವ ದೇವರು ನುಡಿಯುತ್ತಾರೆ. "ಏಕೆಂದರೆ, ನಾನು ನಿಮಗೆ ಪತಿ. ಪಟ್ಟಣದೊಳಗಿಂದ ಒಬ್ಬನನ್ನು, ಗೋತ್ರದೊಳಗಿಂದ ಇಬ್ಬರನ್ನು ತೆಗೆದುಕೊಂಡು, ಚೀಯೋನಿಗೆ ಕರೆದುಕೊಂಡು ಬರುವೆನು. ನನ್ನ ಹೃದಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು. ಅವರು ತಿಳುವಳಿಕೆಯಿಂದಲೂ, ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು. ನೀವು ದೇಶದಲ್ಲಿ ಅಭಿವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ, ‘ಯೆಹೋವ ದೇವರ ಒಡಂಬಡಿಕೆಯ ಮಂಜೂಷವು,’ ಎಂದು ಇನ್ನು ಮೇಲೆ ಅವರು ಹೇಳದಿರುವರು. ಅದು ಮನಸ್ಸಿಗೆ ಬರುವುದಿಲ್ಲ, ಯಾರು ಅದನ್ನು ಸ್ಮರಿಸುವುದಿಲ್ಲ, ಅದರ ಬಗ್ಗೆ ವಿಚಾರಿಸುವುದೂ ಇಲ್ಲ; ಇನ್ನು ಮೇಲೆ ಸರಿಯಾಗುವುದಿಲ್ಲ ಎಂದು ಯೆಹೋವ ದೇವರು ನುಡಿಯುತ್ತಾರೆ.
ಮೊದಲನೆಯ ಒಡಂಬಡಿಕೆಯಲ್ಲಿ ದೈವಿಕ ಆರಾಧನೆಯ ಕ್ರಮಗಳಿದ್ದವು. ಮಾತ್ರವಲ್ಲದೆ ಮಾನವ ನಿರ್ಮಿತ ಪವಿತ್ರ ಸ್ಥಳವೂ ಇತ್ತು. ಅದರೊಳಗೆ ಒಂದು ಗುಡಾರವು ಕಟ್ಟಲಾಗಿತ್ತು. ಅದರ ಪ್ರಥಮ ಭಾಗದಲ್ಲಿ ದೀಪಸ್ತಂಭ, ಮೇಜು, ಸಮ್ಮುಖದ ರೊಟ್ಟಿ ಇವುಗಳಿದ್ದವು. ಅದು ಪವಿತ್ರ ಸ್ಥಳ ಎಂದು ಕರೆಯಲಾಗಿತ್ತು. ಎರಡನೆಯ ತೆರೆಯ ಆಚೆ ಅತಿ ಪವಿತ್ರ ಸ್ಥಳ ಎಂದು ಕರೆಯಲಾದ ಗುಡಾರವಿತ್ತು. ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು. ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಶಿಲಾಶಾಸನಗಳೂ ಇದ್ದವು. ಮಂಜೂಷದ ಮೇಲೆ ಮಹಿಮೆಯ ಕೆರೂಬಿಯರು ಕರುಣಾಸನವನ್ನು ಮುಚ್ಚಿಕೊಂಡಿದ್ದವು. ಸದ್ಯಕ್ಕೆ ಈ ವಿಷಯಗಳನ್ನು ಸವಿಸ್ತಾರವಾಗಿ ನಾನು ಹೇಳುವುದಕ್ಕಾಗದು.
ಆಗ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ ಮಿಂಚುಗಳೂ ಸಪ್ಪಳಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆಲಿಕಲ್ಲಿನ ಮಳೆಯೂ ಉಂಟಾದವು.