Arca de noé
A arca de Noé é história de salvação e fidelidade. Deus instruiu Noé a construir a arca para salvar sua família e os animais do dilúvio — exemplo supremo de obediência e fé.
ಆಗ ದೇವರು ನೋಹನಿಗೆ, "ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು. ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು. ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು. ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು.
ಯೆಹೋವ ದೇವರು ನೋಹನಿಗೆ, "ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ.
ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು. ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು. ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.
ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು. ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು.
ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು.
ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು. ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು.
ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು. ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು. ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು. ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು. ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು. ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ.
ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು.
ಆಗ ದೇವರು ನೋಹನಿಗೆ, "ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ. ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ," ಎಂದು ಹೇಳಿದರು.
ಇದಲ್ಲದೆ ದೇವರು ನೋಹನಿಗೂ ಅವನ ಸಂಗಡ ಇದ್ದ ಅವನ ಪುತ್ರರಿಗೂ ಹೇಳಿದ್ದೇನೆಂದರೆ, "ನಾನು ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡವೂ ನಿಮ್ಮ ತರುವಾಯ ನಿಮ್ಮ ಸಂತತಿಯವರ ಸಂಗಡವೂ ನಿಮ್ಮ ಜೊತೆ ನಾವೆಯೊಳಗಿಂದ ಹೊರಗೆ ಬಂದ ಎಲ್ಲಾ ಜೀವಿಗಳ ಸಹಿತ ಅಂದರೆ ಪಕ್ಷಿಗಳು, ಪಶುಗಳು, ಕಾಡುಮೃಗಗಳು ಮತ್ತು ಭೂಮಿಯ ಎಲ್ಲಾ ಜೀವಿಗಳೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ ಜಲಪ್ರಳಯದಿಂದ ಇನ್ನು ಮೇಲೆ ಎಲ್ಲಾ ಜೀವಿಗಳು ನಾಶವಾಗುವುದಿಲ್ಲ. ಭೂಮಿಯನ್ನು ಹಾಳು ಮಾಡುವುದಕ್ಕೆ ಇನ್ನು ಮುಂದೆ ಇಂಥ ಪ್ರಳಯವು ಇರುವುದಿಲ್ಲ ಎಂದು ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ."
ನನ್ನ ಮಳೆಬಿಲ್ಲನ್ನು ಮೇಘಗಳಲ್ಲಿ ಇಟ್ಟಿದ್ದೇನೆ, ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವುದು.
ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಕೆ ಪಡೆದು ಭಕ್ತಿಯಲ್ಲಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧಮಾಡಿದನು. ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಗೆ ಅನುಸಾರವಾಗಿ ನಂಬಿಕೆಯಿಂದ ಬರುವ ನೀತಿಗೆ ಬಾಧ್ಯನಾದನು.
ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು. ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ. ಕ್ರಿಸ್ತ ಯೇಸು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾರೆ, ದೇವದೂತರೂ ಪ್ರಭುತ್ವಗಳೂ ಅಧಿಕಾರಗಳೂ ಅವರಿಗೆ ಅಧೀನವಾಗಿವೆ.
ಆದರೆ ನೋಹನ ದಿವಸಗಳು ಇದ್ದಂತೆಯೇ, ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು. ಪ್ರಳಯವು ಬರುವುದಕ್ಕಿಂತ ಮುಂಚಿನ ಆ ದಿವಸಗಳಲ್ಲಿ, ನೋಹನು ನಾವೆಯಲ್ಲಿ ಸೇರಿದ ದಿವಸದವರೆಗೆ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು. ಜಲಪ್ರಳಯವು ಬಂದು ಅವರನ್ನು ಕೊಚ್ಚಿಕೊಂಡು ಹೋಗುವವರೆಗೂ ಅವರಿಗೆ ಅದು ತಿಳಿದಿರಲಿಲ್ಲ. ಹಾಗೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು. ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಬೀಸುತ್ತಿರುವಾಗ, ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.