ಎಲೀಯನು ಮಳೆಗಾಗಿ ಪ್ರಾರ್ಥಿಸಿದ್ದು
41 ಅನಂತರ ಅವನು ಅಹಾಬನಿಗೆ, "ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ, ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ" ಅಂದನು. 42 ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದಾಗ ಎಲೀಯನು ಕರ್ಮೆಲಿನ ಬೆಟ್ಟದ ತುದಿಗೆ ಹೋಗಿ ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟನು. 43 ಅವನು ತನ್ನ ಸೇವಕನಿಗೆ, "ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು" ಎಂದು ಆಜ್ಞಾಪಿಸಿದನು. ಸೇವಕನು ಹೋಗಿ ನೋಡಿ ಬಂದು, "ಏನೂ ಕಾಣುವುದಿಲ್ಲ" ಎಂದು ಹೇಳಿದನು. ಹೀಗೆ ಅವನನ್ನು ಏಳು ಸಾರಿ ಕಳುಹಿಸಿದನು. 44 ಏಳನೆಯ ಸಾರಿ ಸೇವಕನು, "ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಿದೆ" ಎಂದು ತಿಳಿಸಿದನು. ಆಗ ಎಲೀಯನು ಅವನಿಗೆ, "ನೀನು ಹೋಗಿ ಅಹಾಬನಿಗೆ, ‘ಬೇಗನೆ ರಥವನ್ನು ಹೂಡಿಸಿಕೊಂಡು ಮಳೆಯು ನಿನ್ನನ್ನು ತಡೆಯದಂತೆ ಬೆಟ್ಟವನ್ನಿಳಿದು ಹೋಗು’ ಎಂದು ಹೇಳು" ಅಂದನು. 45 ಸ್ವಲ್ಪ ಹೊತ್ತಿನಲ್ಲಿಯೇ ಆಕಾಶವು ಮೋಡಗಾಳಿಗಳಿಂದ ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಅಹಾಬನು ರಥದಲ್ಲಿ ಕುಳಿತುಕೊಂಡು ಇಜ್ರೇಲಿಗೆ ಹೋದನು.