ಹೋರೇಬಿನಲ್ಲಿ ಎಲೀಯನು
1 ಎಲೀಯನು ಬಾಳನ ಎಲ್ಲಾ ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದನ್ನೂ ಮತ್ತು ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದನು. 2 ಈಜೆಬೆಲಳು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, "ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೇ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ" ಎಂದು ಹೇಳಿಕಳುಹಿಸಿದಳು. 3 ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು. 4 ತರುವಾಯ ತಾನೊಬ್ಬನೇ ಅರಣ್ಯದೊಳಗೆ ಒಂದು ದಿನದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀ ಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು, "ಯೆಹೋವನೇ ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಬಿಡು. ನಾನು ನನ್ನ ಪೂರ್ವಿಕರಿಗಿಂತ ಉತ್ತಮನಲ್ಲ" ಎಂದು ದೇವರನ್ನು ಪ್ರಾರ್ಥಿಸಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು. 5 ಪಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ, "ಎದ್ದು ಊಟ ಮಾಡು" ಎಂದು ಹೇಳಿದನು. 6 ಎಲೀಯನು ಎದ್ದು ನೋಡಲಾಗಿ ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರು ತನ್ನ ತಲೆಯ ಹತ್ತಿರ ಇರುವುದನ್ನು ಕಂಡು ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ತಿರುಗಿ ಮಲಗಿದನು. 7 ಯೆಹೋವನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ ಅವನಿಗೆ, "ಎದ್ದು ಊಟ ಮಾಡು, ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣಮಾಡಬೇಕಾಗಿದೆ" ಎಂದನು. 8 ಅವನು ಎದ್ದು ತಿಂದು, ಕುಡಿದು ಅದರ ಬಲದಿಂದ ನಲ್ವತ್ತು ದಿನ ಹಗಲಿರುಳು ಪ್ರಯಾಣ ಮಾಡಿ ದೇವಗಿರಿಯಾದ