ದಾವೀದನು ಸೊಲೊಮೋನನಿಗೆ ಕೊಟ್ಟ ಕೊನೆಯ ಆದೇಶ
1 ದಾವೀದನಿಗೆ ಮರಣದ ಸಮಯ ಸಮೀಪಿಸಿದಾಗ ಅವನು ತನ್ನ ಮಗನಾದ ಸೊಲೊಮೋನನಿಗೆ ಆಜ್ಞಾಪಿಸಿದ್ದೇನೆಂದರೆ, 2 "ಭೂಲೋಕದವರೆಲ್ಲರೂ ಹೋಗುವ ದಾರಿಯನ್ನು ನಾನೂ ಈಗ ಹಿಡಿಯಬೇಕು. ನೀನು ಧೈರ್ಯದಿಂದಿರು. ನಿನ್ನ ಪೌರುಷವನ್ನು ತೋರಿಸು. 3 ನಿನ್ನ ದೇವರಾದ ಯೆಹೋವನ ಅಪ್ಪಣೆಗಳನ್ನು ಕೈಕೊಂಡು ಆತನ ಮಾರ್ಗದಲ್ಲಿ ನಡೆದುಕೋ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆತನ ಆಜ್ಞಾನಿಯಮವಿಧಿ ನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಯಾವುದನ್ನು ಮಾಡಿದರೂ ಎಲ್ಲಿಗೆ ಹೋದರೂ ಸಫಲನಾಗುವಿ. 4 ಮತ್ತು ಯೆಹೋವನು, ‘ನಿನ್ನ ಸಂತಾನದವರು ನಂಬಿಗಸ್ತರಾಗಿ, ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನನಗೆ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿರುವುದಾದರೆ, ಅವರು ತಪ್ಪದೆ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು’ ಎಂಬುದಾಗಿ ತಾನು ನನಗೆ ಮಾಡಿದ ವಾಗ್ದಾನವನ್ನು ಸ್ಥಿರಪಡಿಸುವನು,