ಮಂಜೂಷವನ್ನು ದೇವಾಲಯಕ್ಕೆ ತಂದದ್ದು ಮತ್ತು ಪ್ರತಿಷ್ಠಾಪಿಸಿದ್ದು
1 ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು. 2 ಇಸ್ರಾಯೇಲರೆಲ್ಲರೂ ಏಳನೆಯ ತಿಂಗಳಾದ ಆಶ್ವೀಜ ಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು. 3 ಇಸ್ರಾಯೇಲರ ಎಲ್ಲಾ ಹಿರಿಯರು ಒಟ್ಟಾಗಿ ಬಂದಾಗ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು. 4 ಉಳಿದ ಯಾಜಕರೂ ಮತ್ತು ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತುಕೊಂಡರು. 5 ಅರಸನಾದ ಸೊಲೊಮೋನನು ಅಲ್ಲಿ ಕೂಡಿ ಬಂದಿದ್ದ ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಯಜ್ಞಮಾಡಿದರು. 6 ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು. 7 ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. 8 ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇವೆ. 9 ಮಂಜೂಷದಲ್ಲಿ ಎರಡು ಕಲ್ಲಿನ ಹಲಿಗೆಗಳ ಹೊರತಾಗಿ ಬೇರೇನೂ ಇರಲಿಲ್ಲ. ಯೆಹೋವನು ಐಗುಪ್ತದಿಂದ ಬಂದ ಇಸ್ರಾಯೇಲರೊಡನೆ ಹೋರೇಬ್ ಬೆಟ್ಟದ ಬಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿರಿಸಿದನು. 10 ಯಾಜಕರು ಪರಿಶುದ್ಧ ಸ್ಥಳದಿಂದ ಹೊರಗೆ ಬಂದ ಕೂಡಲೆ ಮೇಘವು ಯೆಹೋವನ ಆಲಯವನ್ನು ತುಂಬಿಕೊಂಡಿತು. 11 ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡ ಮೇಘವು ಆಲಯವನ್ನು ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲು ಆಗಲಿಲ್ಲ.