10 ಹನ್ನಳು ಬಹುದುಃಖದಿಂದ ಕಣ್ಣೀರು ಸುರಿಸುತ್ತಾ ಯೆಹೋವನಿಗೆ, 11 "ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನಿನ್ನ ದಾಸಿಯನ್ನು ಮರೆಯದೆ ನನ್ನನ್ನು ನೆನಪಿಸಿಕೊಂಡು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ಅವನನ್ನು ನಿನಗೆ ಪ್ರತಿಷ್ಠಿಸುವೆನು; 1:11 ನ್ಯಾಯ 13:5.ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಮುಟ್ಟಗೊಡುವುದಿಲ್ಲ" ಎಂದು ಪ್ರಾರ್ಥಿಸಿ ಹರಕೆಮಾಡಿದಳು. 12 ಆಕೆಯು ಬಹಳ ಹೊತ್ತಿನ ವರೆಗೆ ಯೆಹೋವನ ಮುಂದೆ ಪ್ರಾರ್ಥನೆಮಾಡುತ್ತಿರುವಾಗ ಏಲಿಯು ಆಕೆಯ ಬಾಯನ್ನೇ ನೋಡುತ್ತಿದ್ದನು. 13 ಆಕೆ ತನ್ನ ಹೃದಯದಲ್ಲಿ ಪ್ರಾರ್ಥಿಸುತ್ತಿದ್ದರಿಂದ ತುಟಿಗಳು ಮಾತ್ರ ಅಲ್ಲಾಡುತ್ತಿದ್ದವು; ಶಬ್ದ ಕೇಳಿಸುತ್ತಿರಲಿಲ್ಲ. ಆದ್ದರಿಂದ ಆಕೆಯು ಮದ್ಯಪಾನಮಾಡಿದ್ದಾಳೆಂದು ತಿಳಿದು 14 ಏಲಿಯು, "ನಿನ್ನ ಕುಡಿತದ ಅಮಲು ಇನ್ನೂ ಇಳಿಯಲಿಲ್ಲವೇ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟು ಹೋಗಲಿ" ಅಂದನು. 15 ಅದಕ್ಕೆ ಹನ್ನಳು "ಸ್ವಾಮೀ, ಹಾಗಲ್ಲ; ನಾನು ಬಹು ದುಃಖಪೀಡಿತಳು; ದ್ರಾಕ್ಷಾರಸವನ್ನಾದರೂ ಬೇರೆ ಯಾವ ಮದ್ಯವನ್ನಾದರೂ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಯೆಹೋವನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. 16 ನಿನ್ನ ದಾಸಿಯಾದ ನನ್ನನ್ನು 1:16 1 ಅರಸು 21:10.ಅಯೋಗ್ಯಳೆಂದು ನೆನಸಬೇಡ; ಈವರೆಗೆ ನನ್ನ ಹೆಚ್ಚಾದ ಚಿಂತೆಯನ್ನೂ, ವ್ಯಥೆಯನ್ನೂ ಅರಿಕೆಮಾಡಿಕೊಳ್ಳುತ್ತಿದ್ದೆನು" ಎಂದು ಹೇಳಿದಳು. 17 ಆಗ ಏಲಿಯು ಆಕೆಗೆ, "ಸಮಾಧಾನದಿಂದ ಹೋಗು; ಇಸ್ರಾಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ" ಎಂದನು. 18 ಹನ್ನಳು ಏಲಿಗೆ, "ನಿನ್ನ ದಾಸಿಯ ಮೇಲೆ ಕಟಾಕ್ಷವಿರಲಿ" ಎಂದು ಹೇಳಿ ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮುಖದಲ್ಲಿ ದುಃಖವು ಕಾಣಲಿಲ್ಲ.
ಸಮುವೇಲನ ಜನನ ಮತ್ತು ಸಮರ್ಪಣೆ
19 ಅವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ ರಾಮದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳೊಂದಿಗೆ ಸಂಗಮಿಸಲು, ಯೆಹೋವನು ಆಕೆಯ ಪ್ರಾರ್ಥನೆಯನ್ನು ಪರಿಗಣಿಸಿದ್ದರಿಂದ ಆಕೆಯು ಗರ್ಭಿಣಿಯಾದಳು. 20 ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು.