ಎಲೀಷನು ಕುಷ್ಠರೋಗಿಯಾದ ನಾಮಾನನನ್ನು ವಾಸಿಮಾಡಿದ್ದು
1 ಅರಾಮ್ಯರ ಅರಸನಿಗೆ ನಾಮಾನನೆಂಬ ಒಬ್ಬ ಸೇನಾಧಿಪತಿಯಿದ್ದನು. ಯೆಹೋವನು ಇವನ ಮುಖಾಂತರವಾಗಿ ಅರಾಮ್ಯರಿಗೆ ಜಯವನ್ನು ಅನುಗ್ರಹಿಸಿದ್ದದರಿಂದ ಅರಸನು ಇವನನ್ನು ಮಹಾ ಪುರುಷನೆಂದೂ ಸನ್ಮಾನಯೋಗ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಕುಷ್ಠರೋಗಿಯಾಗಿದ್ದನು. 2 ಅರಾಮ್ಯರು ಒಂದು ಸಾರಿ ಸುಲಿಗೆ ಮಾಡುವುದಕ್ಕೋಸ್ಕರ ಇಸ್ರಾಯೇಲರ ಪ್ರಾಂತ್ಯಕ್ಕೆ ಹೋಗಿ ಬರುವಾಗ ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದಿದ್ದರು. ಆಕೆಯು ನಾಮಾನನ ಹೆಂಡತಿಗೆ ಸೇವಕಿಯಾದಳು.
3 ಆಕೆಯು ಒಂದು ದಿನ ತನ್ನ ಯಜಮಾನಿಯ ಬಳಿ, "ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅವನು ನನ್ನ ಯಜಮಾನನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು" ಎಂದು ಹೇಳಿದಳು. 4 ನಾಮಾನನು ಅರಸನ ಸನ್ನಿಧಿಗೆ ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತಿಳಿಸಿದನು.
5 ಅರಾಮ್ಯರ ಅರಸನು ಅವನಿಗೆ, "ನೀನು ಅಲ್ಲಿಗೆ ಹೋಗಿ ಬಾ. ನಾನು ನಿನ್ನ ಕೈಯಲ್ಲಿ ಇಸ್ರಾಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ" ಎಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, (ಮೂವತ್ತು ಸಾವಿರ) ಆರು ಸಾವಿರ ತೊಲೆ ಬಂಗಾರ, ಹತ್ತು ಜೊತೆ ಬಟ್ಟೆಗಳು ಇವುಗಳನ್ನು ತೆಗೆದುಕೊಂಡು ಸಮಾರ್ಯಕ್ಕೆ ಹೋಗಿ, 6 ಪತ್ರವನ್ನು ಇಸ್ರಾಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, "ನನ್ನ ಸೇವಕನಾದ ನಾಮಾನನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ, ನೀನು ಅವನ ಕುಷ್ಠರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೋ" ಎಂಬುದಾಗಿ ಬರೆದಿತ್ತು.
7 ಇಸ್ರಾಯೇಲರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, "ಅವನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ. ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನಮಾಡುವುದಕ್ಕಾಗಲಿ, ಸಾಯಿಸುವುದಕ್ಕಾಗಲಿ ನನಗೆ ಸಾಮರ್ಥ್ಯ ಉಂಟೋ? ಇವನು ನನ್ನೊಡನೆ ಜಗಳವಾಡುವುದಕ್ಕೆ ಕಾರಣ ಹುಡುಕುತ್ತಿದ್ದಾನಲ್ಲವೇ ನೀವೇ ಆಲೋಚಿಸಿ ನೋಡಿರಿ" ಎಂದು ಹೇಳಿದನು.
8 ಇಸ್ರಾಯೇಲರ ಅರಸನು ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೇವರ ಮನುಷ್ಯನಾದ ಎಲೀಷನು ಕೇಳಿ ದೂತರ ಮುಖಾಂತರವಾಗಿ ಅವನಿಗೆ, "ನೀನು, ನಿನ್ನ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸು, ಇಸ್ರಾಯೇಲರಲ್ಲಿ ಒಬ್ಬ ಪ್ರವಾದಿಯಿದ್ದಾನೆಂಬುದು ಅವನಿಗೆ ಗೊತ್ತಾಗಲಿ" ಎಂದು ಹೇಳಿ ಕಳುಹಿಸಿದನು. 9 ನಾಮಾನನು ರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. 10 ಎಲೀಷನು ಅವನಿಗೆ, "ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ" ಎಂದು ಹೇಳಿ ಕಳುಹಿಸಿದನು.
11 ನಾಮಾನನು ಇದನ್ನು ಕೇಳಿ ಕೋಪಗೊಂಡು, "ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?" ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು.
13 ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, "ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು" ಎಂದು ಹೇಳಿದರು. 14 ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.