2 ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. 3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ ದೇವರ ನಿವಾಸವು ಮನುಷ್ಯರೊಂದಿಗೆ ಇದೆ. ಆತನು ಅವರೊಡನೆ ವಾಸಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು. 4 ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು" ಎಂದು ಹೇಳಿತು.
Publicidade
Publicidade