17 "ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು,
ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು;
ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು;
ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು;
18 ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ
ನನ್ನ ಆತ್ಮವನ್ನು ಸುರಿಸುವೆನು,
ಅವರೂ ಪ್ರವಾದಿಸುವರು.
19,20 ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ
ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ
ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು.
ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು.
ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
21 ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ" ಎಂಬುದೇ.