ಹುಟ್ಟುಕುಂಟನು ನಡೆದಾಡಿದ್ದು
1 ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು. 2 ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು. 3 ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು. 4 ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ "ನಮ್ಮನ್ನು ನೋಡು" ಅಂದನು. 5 ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು. 6 ಆಗ ಪೇತ್ರನು "ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ" ಎಂದು ಹೇಳಿ, 7 ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು. 8 ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು. 9 ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ; 10 ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು.