ಯುಗದ ಸಮಾಪ್ತಿ
1 "ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ದೇವದೂತ ಮೀಕಾಯೇಲನು ಆ ಕಾಲದಲ್ಲಿ ಏಳುವನು. ಮೊಟ್ಟಮೊದಲು ಜನಾಂಗವು ಉಂಟಾದ ದಿನದಿಂದ ಇಂದಿನವರೆಗೂ ಸಂಭವಿಸದಂಥ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು. 2 ಸತ್ತು ಧೂಳಿನ ನೆಲದೊಳಗೆ ದೀರ್ಘ ನಿದ್ರೆಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನೆ ಮತ್ತು ನಿತ್ಯತಿರಸ್ಕಾರಗಳನ್ನು ಅನುಭವಿಸುವರು.