ಹೆಂಡತಿಯನ್ನು ಪರಿತ್ಯಾಗಮಾಡುವವನ ವಿಷಯದಲ್ಲಿ ಕ್ರಮ
13 ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ, 14 "ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು" ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ, 15 ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು. 16 ಆ ಸ್ತ್ರೀಯ ತಂದೆ ಅವರಿಗೆ, "ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ 17 ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ" ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.