ದೇವರನ್ನು ಪ್ರೀತಿಸಬೇಕೆಂಬ ಆಜ್ಞೆ
1 ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ. 2 ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ. 3 ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ 6:3 ಬಹಳಷ್ಟು ಫಲವತ್ತಾದ ದೇಶ.ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು.
4 ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; 5 ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
6 ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. 7 ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು. 8 ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು, ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. 9 ನಿಮ್ಮ ಮನೆಬಾಗಿಲಿನ ನಿಲುವು ಪಟ್ಟಿಗಳಲ್ಲಿಯೂ ಮತ್ತು ದ್ವಾರಗಳ ಮೇಲೆಯೂ ಇವುಗಳನ್ನು ಬರೆಯಬೇಕು.