ಜನರು ಭಯಪಟ್ಟಿದ್ದು
18 ಆ ಗುಡುಗು, ಮಿಂಚು, ತುತ್ತೂರಿಯ ಧ್ವನಿ, ಹಾಗೂ ಬೆಟ್ಟದಿಂದ ಹೊರಬರುತ್ತಿದ್ದ ಹೊಗೆಯನ್ನು ಜನರೆಲ್ಲರೂ ನೋಡಿ, ನಡುಗುತ್ತಾ ದೂರದಲ್ಲಿ ನಿಂತುಕೊಂಡರು. 19 ಅವರು ಮೋಶೆಗೆ, "ನೀನೇ ನಮ್ಮ ಸಂಗಡ ಮಾತನಾಡು, ನಾವು ಕೇಳುತ್ತೇವೆ. ದೇವರು ನಮ್ಮ ಸಂಗಡ ಮಾತನಾಡಿದರೆ ನಾವು ಸತ್ತು ಹೋಗುತ್ತೇವೆ" ಎಂದು ಹೇಳಿದರು. 20 ಅದಕ್ಕೆ ಮೋಶೆಯು ಜನರಿಗೆ, "ಭಯಪಡಬೇಡಿರಿ, ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ, ನೀವು ಪಾಪ ಮಾಡದಂತೆ ಆತನ ಮೇಲಿನ ಭಯವು ನಿಮಗೆ ಇರಬೇಕೆಂತಲೂ ಇಳಿದು ಬಂದಿದ್ದಾನೆ" ಎಂದನು. 21 ಜನರು ದೂರದಲ್ಲಿ ನಿಂತಿದ್ದರು. ಮೋಶೆಯು ದೇವರಿರುವ ಆ ಕಾರ್ಗತ್ತಲಿನ ಸಮೀಪಕ್ಕೆ ಹೋದನು.
ಯಜ್ಞವೇದಿಯ ಬಗ್ಗೆ ನಿಯಮಗಳು
22 ಯೆಹೋವನು ಮೋಶೆಗೆ ಹೀಗೆಂದನು, "ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ; ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ. 23 ನೀವು ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ. 24 ನೀವು ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡಬೇಕು. ನೀವು ಅದರ ಮೇಲೆ ನಿಮ್ಮ ಸರ್ವಾಂಗಹೋಮ, ಸಮಾಧಾನಯಜ್ಞ, ಕುರಿದನಗಳನ್ನು ಸಮರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು. 25 ನೀವು ನನಗಾಗಿ ಕಲ್ಲಿನಿಂದ ಯಜ್ಞವೇದಿಯನ್ನು ಕಟ್ಟುವುದಾದರೆ, ಅದನ್ನು ಕೆತ್ತಿರುವ ಕಲ್ಲುಗಳಿಂದ ಕಟ್ಟಬಾರದು. ಏಕೆಂದರೆ ಉಳಿ, ಮುಂತಾದುದನ್ನು ಅದರ ಮೇಲೆ ಉಪಯೋಗಿಸಿದರೆ ಅದು ಅಪವಿತ್ರವಾಗುವುದು. 26 ಅದಲ್ಲದೆ ನನ್ನ ಯಜ್ಞವೇದಿಯನ್ನು ನಿಮ್ಮ ನಗ್ನತೆಯು ಕಾಣುವ ಹಾಗೆ ಮೆಟ್ಟಲುಗಳನ್ನು ಬಳಸಿ ಅದನ್ನು ಹತ್ತಬಾರದು’" ಎಂದು ಆಜ್ಞಾಪಿಸಿದನು.