ಯಜ್ಞವೇದಿ
1 ಯಜ್ಞವೇದಿಯನ್ನು ಜಾಲೀಮರದಿಂದ ಐದು ಮೊಳ ಉದ್ದವಾಗಿಯೂ, ಐದು ಮೊಳ ಅಗಲವಾಗಿಯೂ ಚಚ್ಚೌಕವಾಗಿ ಮಾಡಿಸಬೇಕು. ಅದರ ಎತ್ತರವು ಮೂರು ಮೊಳವಿರಬೇಕು. 2 ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿಸಬೇಕು. ಆ ಕೊಂಬುಗಳು ಯಜ್ಞವೇದಿಯಿಂದಲೇ ಬಂದವುಗಳಾಗಿರಬೇಕು. ಆ ಯಜ್ಞವೇದಿಗೆ ತಾಮ್ರದ ತಗಡುಗಳನ್ನು ಹೊದಿಸಬೇಕು. 3 ಅದರಲ್ಲಿರುವ ಬೂದಿಯನ್ನು ತೆಗೆಯುವುದಕ್ಕಾಗಿ ತಟ್ಟೆಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ, ಮುಳ್ಳುಚಮಚಗಳನ್ನೂ, ಹಾಗೂ ಅಗ್ಗಿಷ್ಟಿಕೆಗಳನ್ನೂ ಮಾಡಿಸಬೇಕು. ಆ ಉಪಕರಣಗಳೆಲ್ಲಾ ತಾಮ್ರದವುಗಳಾಗಿರಬೇಕು. 4 ಯಜ್ಞವೇದಿಗೆ ಹೆಣಿಗೆ ಕೆಲಸದಿಂದ ತಾಮ್ರದ ಜಾಲರಿಯನ್ನು ಮಾಡಿಸಬೇಕು, ಆ ಜಾಲರಿಯ ನಾಲ್ಕು ಮೂಲೆಗಳಿಗೆ ತಾಮ್ರದ ಬಳೆಗಳನ್ನು ಹಾಕಿಸಬೇಕು. 5 ಆ ಜಾಲರಿಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗಿನವರೆಗೆ ಇದ್ದು ಯಜ್ಞವೇದಿಯ ಅಡಿಯಿಂದ ನಡುವಿನ ತನಕ ಇರುವಂತೆ ಹಾಕಿಸಬೇಕು. 6 ಯಜ್ಞವೇದಿಯನ್ನು ಹೊರುವ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ, ತಾಮ್ರದ ತಗಡುಗಳನ್ನು ಹೊದಿಸಬೇಕು. 7 ಆ ಕೋಲುಗಳನ್ನು ಆ ಬಳೆಗಳಲ್ಲಿ ಸೇರಿಸಿದಾಗ ಅವು ಯಜ್ಞವೇದಿಯನ್ನು ಹೊರುವುದಕ್ಕಾಗಿ ಅದರ ಎರಡೂ ಕಡೆಗಳಲ್ಲಿ ಇರಬೇಕು. 8 ಆ ಯಜ್ಞವೇದಿಯನ್ನು ಹಲಗೆಗಳಿಂದ ಟೊಳ್ಳಾದ ಪೆಟ್ಟಿಗೆಯಂತೆ ಮಾಡಿಸಬೇಕು. ನಾನು ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಿಸಬೇಕು.
ವಿಮೋ 38:9-20