7 ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಕರೆದುಕೊಂಡು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಲು, ಯಾಕೋಬನು ಫರೋಹನನ್ನು ಆಶೀರ್ವದಿಸಿದನು. 8 ಫರೋಹನು, "ನಿನಗೆ ಈಗ ಎಷ್ಟು ವರ್ಷ?" ಎಂದು ಕೇಳಿದನು.
9 ಯಾಕೋಬನು ಫರೋಹನಿಗೆ, "ನನ್ನ ಇಹಲೋಕ ಪ್ರಯಾಣದ ಕಾಲವು ನೂರಮೂವತ್ತು ವರ್ಷಗಳು. ನಾನು ಜೀವಿಸಿರುವ ಕಾಲವು ಸ್ವಲ್ಪವಾಗಿಯೂ ಹಾಗೂ ದುಃಖಕರವಾಗಿಯೂ ಇತ್ತು; ಆದರೂ ನನ್ನ ಪೂರ್ವಿಕರು ಜೀವಿಸಿದಷ್ಟು ವರ್ಷಗಳು ನನಗಾಗಿಲ್ಲ" ಎಂದು ಹೇಳಿದನು. 10 ಪುನಃ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.
11 ಫರೋಹನ ಅಪ್ಪಣೆಯ ಮೇರೆಗೆ ಯೋಸೇಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಐಗುಪ್ತ ದೇಶದಲ್ಲಿ ವಾಸಮಾಡಲು ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸ್ವತ್ತು ಕೊಟ್ಟನು. 12 ಯೋಸೇಫನು ತನ್ನ ತಂದೆಗೂ, ಅಣ್ಣತಮ್ಮಂದಿರಿಗೂ, ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.