8 ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ, 9 "ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು. 10 ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ. 11 ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ" ಎಂದು ಹೇಳಿದನು.
12 ದೇವರು ಪುನಃ ಹೇಳಿದ್ದೇನಂದರೆ, "ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು. 13 ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ.