53 ಅದಕ್ಕೆ ಯೇಸು ಅವರಿಗೆ, "ನಿಮಗೆ ನಿಜ ನಿಜವಾಗಿ ಹೇಳುತ್ತೇನೆ; ನೀವು ಮನುಷ್ಯಕುಮಾರನ ದೇಹವನ್ನು ತಿಂದು ಮತ್ತು ಆತನ ರಕ್ತವನ್ನು ಕುಡಿಯದೆ ಹೋದರೆ, ನಿಮ್ಮಲ್ಲಿ ನಿತ್ಯಜೀವವಿರುವುದಿಲ್ಲ. 54 ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿಯುವನೋ ಅವನು ನಿತ್ಯ ಜೀವವನ್ನು ಹೊಂದುವನು. ಮತ್ತು ನಾನು ಅವನನ್ನು ಕಡೆ ದಿನದಲ್ಲಿ ಎಬ್ಬಿಸುವೆನು. 55 ಏಕೆಂದರೆ ನನ್ನ ದೇಹವೇ ನಿಜವಾದ ಆಹಾರವೂ ಮತ್ತು ನನ್ನ ರಕ್ತವೇ ನಿಜವಾದ ಪಾನವೂ ಆಗಿದೆ. 56 ಯಾರು ನನ್ನ ದೇಹವನ್ನು ತಿಂದು, ನನ್ನ ರಕ್ತವನ್ನು ಕುಡಿದಿದ್ದಾನೋ ಅವನು ನನ್ನಲ್ಲಿ ನೆಲೆಸಿರುತ್ತಾನೆ; ನಾನು ಅವನಲ್ಲಿ ನೆಲೆಸಿರುತ್ತೇನೆ. 57 ಜೀವವುಳ್ಳ ತಂದೆಯು ನನ್ನನ್ನು ಅಧಿಕಾರದೊಂದಿಗೆ ಕಳುಹಿಸಿಕೊಟ್ಟಿದ್ದಾನೆ. ನಾನು ತಂದೆಯ ನಿಮಿತ್ತವಾಗಿ ಜೀವಿಸುತ್ತೇನೆ, ಅದರಂತೆ ನನ್ನನ್ನು ತಿನ್ನುವವನೂ ನನ್ನ ನಿಮಿತ್ತವಾಗಿಯೇ ಜೀವಿಸುವನು. 58 ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೇ, ನಿಮ್ಮ ಪೂರ್ವಿಕರು ಮನ್ನಾವನ್ನು ತಿಂದರೂ ಸತ್ತರು, ಆದರೆ, ಈ ರೊಟ್ಟಿಯನ್ನು ತಿನ್ನುವವನು ಸದಾಕಾಲಕ್ಕೂ ಜೀವಿಸುವನು" ಎಂದು ಹೇಳಿದನು.