ಯೆಹೋವನು ತನ್ನ ಜನರೊಂದಿಗೆ ಮಾಡಿಕೊಳ್ಳುವ ಹೊಸ ಒಡಂಬಡಿಕೆ
31 ಯೆಹೋವನು ಇಂತೆನ್ನುತ್ತಾನೆ, "ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಮತ್ತು ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು. 32 ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈ ಹಿಡಿದು ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. 33 ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ. 34 ನೆರೆಹೊರೆಯವರೂ, ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು, ‘ಯೆಹೋವನ ಜ್ಞಾನವನ್ನು ಪಡೆಯಿರಿ’ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವುದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ. ಇದು ಯೆಹೋವನ ನುಡಿ" ಎಂಬುದೇ.