ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು
26 ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು; 27 ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು. 28 ಆ ದೂತನು ಆಕೆಯ ಬಳಿಗೆ ಬಂದು "ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ" ಅಂದನು.
29 ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು. 30 ಆ ದೂತನು ಆಕೆಗೆ, "ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ. 31 ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. 33 ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು" ಎಂದು ಹೇಳಿದನು.
34 ಆಗ ಮರಿಯಳು ಆ ದೂತನಿಗೆ, "ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ" ಎಂದು ಕೇಳಿದಳು. 35 ಅದಕ್ಕೆ ದೂತನು, "ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು. 36 ಇಗೋ, ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡು ಮಗುವಿದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಈಗ ಆರನೆಯ ತಿಂಗಳು. 37 ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ" ಅಂದನು. 38 ಆಗ ಮರಿಯಳು "ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ" ಅಂದಳು. ಆ ಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.