ಜಕರೀಯನ ಪ್ರವಾದನೆ
67 ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ನುಡಿದ ಪ್ರವಾದನೆ ಏನೆಂದರೆ,
68 "ಇಸ್ರಾಯೇಲರ ದೇವರಾಗಿರುವ ಕರ್ತನಿಗೆ ಸ್ತೋತ್ರವು;
ತನ್ನ ಪ್ರಜೆಯನ್ನು ಸಂಧಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ;
69 ತನ್ನ ಸೇವಕನಾದ ದಾವೀದನ ಮನೆತನದಲ್ಲಿ,
ನಮಗೋಸ್ಕರ ಒಬ್ಬ ರಕ್ಷಣಾವೀರನನ್ನು ಎಬ್ಬಿಸಿದ್ದಾನೆ.
70 ಆತನು ಪೂರ್ವಕಾಲದಲ್ಲಿಯೇ ತನ್ನ ಪರಿಶುದ್ಧ ಪ್ರವಾದಿಗಳ ಮೂಲಕ ತಾನು ಹೇಳಿದಂತೆಯೇ,
71 ನಮ್ಮ ವೈರಿಗಳಿಂದಲೂ, ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.
72,73 ಆತನು ನಮ್ಮ ಪೂರ್ವಿಕರಿಗೆ ದಯೆಯನ್ನು ತೋರಿಸುವುದರ ಮೂಲಕ
ನಮ್ಮ ಮೂಲಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿ ಕೊಟ್ಟ
ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಪಿಸಿಕೊಳ್ಳುವವನಾಗಿದ್ದಾನೆ.
74,75 ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆಹೊಂದಿ ಭಯವಿಲ್ಲದವರಾಗಿದ್ದು,
ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ
ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ.
76 ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯೆನಿಸಿಕೊಳ್ಳುವಿ.
ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ,
77,78 ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು
ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ.
ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ,
79 ಅದು ಕತ್ತಲಲ್ಲಿಯೂ, ಮರಣಾಂಧಕಾರದಲ್ಲಿಯೂ ವಾಸಿಸುತ್ತಿದ್ದ ನಮಗೆ ಬೆಳಕನ್ನು ಕೊಟ್ಟು
ನಮ್ಮ ಕಾಲುಗಳನ್ನು ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವುದು."