ಯೇಸು ಸುಂಕದವನಾದ ಜಕ್ಕಾಯನ ಮನೆಗೆ ಹೋದದ್ದು
1 ಯೇಸು ಯೆರಿಕೋ ಊರನ್ನು ಪ್ರವೇಶಿಸಿ ಹಾದುಹೋಗುವಾಗ, 2 ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಸುಂಕವಸೂಲಿಯ ಮುಖ್ಯಸ್ಥನು ಮತ್ತು ಐಶ್ವರ್ಯವಂತನಾಗಿದ್ದನು. 3 ಅವನು ಯೇಸು ಹೇಗಿದ್ದಾನೆಂದು ನೋಡಲು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದುದರಿಂದ, ಜನರ ಗುಂಪಿನ ನಿಮಿತ್ತ ನೋಡಲಾರದೆ ಹೋದನು. 4 ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು. 5 ಯೇಸು ಅಲ್ಲಿಗೆ ಬಂದು ಮೇಲಕ್ಕೆ ನೋಡಿ, "ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈಹೊತ್ತು ನಿನ್ನ ಮನೆಯಲ್ಲಿ ಉಳಿದುಕೊಳ್ಳಬೇಕು" ಎಂದು ಅವನಿಗೆ ಹೇಳಲು, 6 ಅವನು ತಕ್ಷಣ ಇಳಿದು ಬಂದು ಆತನನ್ನು ಸಂತೋಷದಿಂದ ಬರಮಾಡಿಕೊಂಡನು. 7 ಇದನ್ನು ನೋಡಿದವರೆಲ್ಲರು, "ಈತನು ಪಾಪಿಯಾಗಿರುವವನ ಬಳಿಯಲ್ಲಿ ಉಳಿದುಕೊಳ್ಳುವುದಕ್ಕೆ ಹೋಗಿದ್ದಾನೆ" ಎಂದು ಗೊಣಗುಟ್ಟಿದರು. 8 ಆದರೆ ಜಕ್ಕಾಯನು ನಿಂತುಕೊಂಡು "ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ" ಎಂದು ಹೇಳಿದನು. 9 ಇದನ್ನು ಕೇಳಿ ಯೇಸು, "ಈಹೊತ್ತು ಈ ಮನೆಗೆ ರಕ್ಷಣೆಯಾಯಿತು. ಇವನು ಸಹ ಅಬ್ರಹಾಮನ ವಂಶದವನಲ್ಲವೇ. 10 ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು" ಎಂದು ಹೇಳಿದನು.