25 ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26 ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27 ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28 ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ,
29 "ಕರ್ತನೇ, ನಿನ್ನ ಮಾತು ನೆರವೇರಿತು;
ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು.
30,31 ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ
ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು.
32 ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು,
ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ" ಅಂದನು.