ಯೇಸು ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು
1 ಆತನು ತನ್ನ ಮಾತುಗಳನ್ನೆಲ್ಲಾ ಜನರು ಕೇಳುವಂತೆ ಹೇಳಿ ಮುಗಿಸಿದ ಮೇಲೆ, ಕಪೆರ್ನೌಮಿಗೆ ಬಂದನು. 2 ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು. 3 ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು. 4 ಅವರು ಯೇಸುವಿನ ಬಳಿಗೆ ಬಂದು, "ನಿನ್ನಿಂದ ಇಂಥ ಉಪಕಾರ ಹೊಂದುವುದಕ್ಕೆ ಅವನು ಯೋಗ್ಯನು, 5 ಅವನು ನಮ್ಮ ದೇಶವನ್ನು ಪ್ರೀತಿಸಿ ಪ್ರಾರ್ಥನೆಗಾಗಿ ನಮಗೆ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿರುವನು" ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು, 6 ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ, "ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ. ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ. 7 ಈ ಕಾರಣದಿಂದ ನಾನು ನಿಮ್ಮ ಬಳಿಗೆ ಬರುವುದಕ್ಕೆ ನನ್ನನ್ನೇ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು. 8 ನಾನು ಸಹ ಮತ್ತೊಬ್ಬರ ಅಧಿಕಾರದ ಕೆಳಗಿರುವವನು; ನನ್ನ ಕೈ ಕೆಳಗೆ ಸಿಪಾಯಿಗಳಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಅವನು ಬರುತ್ತಾನೆ; ನನ್ನ ಆಳಿಗೆ ‘ಇಂಥಿಂಥದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ" ಎಂಬುದಾಗಿ ಹೇಳಿಸಿದನು.
9 ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ನೋಡಿ, "ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ" ಅಂದನು. 10 ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರುಗಿ ಮನೆಗೆ ಹೋಗಿ ಆಳು ಸ್ವಸ್ಥನಾಗಿರುವುದನ್ನು ಕಂಡರು.