31 ಯೇಸು ತಮ್ಮ ಬೋಧನೆಯ ಮುಂದುವರಿಸುತ್ತಾ, "ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಪೇಟೆಯಲ್ಲಿ ಕುಳಿತುಕೊಂಡು, ‘ನಾವು ನಿಮಗೋಸ್ಕರ ಕೊಳಲೂದಿದೆವು, ನೀವು ಕುಣಿಯಲಿಲ್ಲ; ಗೋಳಾಡಿದೆವು, ನೀವು ಅಳಲಿಲ್ಲ’ ಎಂದು ಒಬ್ಬರಿಗೊಬ್ಬರು ಕೂಗಿ ಹೇಳುವಂಥ ಮಕ್ಕಳನ್ನು ಹೋಲುತ್ತಾರೆ. 33 ಏಕೆಂದರೆ ಸ್ನಾನಿಕನಾದ ಯೋಹಾನನು ಬಂದಿದ್ದಾನೆ; ಅವನು ರೊಟ್ಟಿ ತಿನ್ನದವನು, ದ್ರಾಕ್ಷಾರಸ ಕುಡಿಯದವನು; ನೀವು, ‘ಅವನಿಗೆ ದೆವ್ವ ಹಿಡಿದದೆ’ ಅನ್ನುತ್ತೀರಿ. 34 ಮನುಷ್ಯಕುಮಾರನು ಬಂದಿದ್ದಾನೆ, ಆತನು ಅನ್ನ ಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ. ನೀವು, ‘ಇಗೋ, ಈತನು ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಷ್ಠರ ಗೆಳೆಯನು’ ಅನ್ನುತ್ತೀರಿ. 35 ಆದರೆ ಜ್ಞಾನವಾದರೋ ತನ್ನ ಎಲ್ಲಾ ಮಕ್ಕಳಿಂದ ಸಮರ್ಥನೆ ಪಡೆದದೆ" ಅಂದನು.
ಯೇಸು ದುರಾಚಾರಿಣಿಯಾದ ಸ್ತ್ರೀಯನ್ನು ಕ್ಷಮಿಸಿದ್ದು
36 ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಆತನ ಸಂಗಡ ಊಟಕ್ಕೆ ಕುಳಿತುಕೊಂಡನು. 37 ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು,