ಯೇಸು ಯಾಯೀರನ ಮಗಳನ್ನು ಬದುಕಿಸಿದ್ದು ಮತ್ತು ರಕ್ತಕುಸುಮ ರೋಗಿಯನ್ನು ವಾಸಿಮಾಡಿದ್ದು
40 ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನಿಗಾಗಿ ಕಾಯುತ್ತಿದ್ದು ಅವನನ್ನು ಸಂತೋಷದಿಂದ ಸ್ವೀಕರಿಸಿದರು. 41,42 ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದನು. ಏಕೆಂದರೆ ಹೆಚ್ಚುಕಡಿಮೆ ಹನ್ನೆರಡು ವರ್ಷದವಳಾದ ಅವನ ಒಬ್ಬಳೇ ಮಗಳು ಸಾಯುವ ಸ್ಥಿತಿಯಲ್ಲಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಯೇಸು ಹೋಗುತ್ತಿರುವಲ್ಲಿ ಜನಸಮೂಹವು ಸುತ್ತಲಿನಿಂದಲೂ ಆತನನ್ನು ನೂಕಾಡುತ್ತಿತ್ತು.
43 ಆಗ ಹನ್ನೆರಡು ವರ್ಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. 44 ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. 45 ಆಗ ಯೇಸುವು, "ನನ್ನನ್ನು ಮುಟ್ಟಿದವರಾರು?" ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, "ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ" ಅಂದನು. 46 ಆದರೆ ಯೇಸುವು, "ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು" ಅಂದಾಗ, 47 ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು. 48 ಯೇಸು ಆಕೆಗೆ, "ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು" ಎಂದು ಹೇಳಿದನು.
49 ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, "ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ" ಅಂದನು. 50 ಆದರೆ ಯೇಸು ಅದನ್ನು ಕೇಳಿ ಸಭಾಮಂದಿರದ ಅಧಿಕಾರಿಗೆ, "ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು" ಎಂದು ಉತ್ತರಕೊಟ್ಟನು.
51 ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ. 52 ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು ಅವರಿಗೆ, "ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ" ಅನ್ನಲು, 53 ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು. 54 ಆದರೆ ಆತನು ಆಕೆಯ ಕೈ ಹಿಡಿದು, "ಮಗಳೇ, ಎದ್ದೇಳು" ಎಂದು ಕೂಗಿ ಹೇಳಿದನು. 55 ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು. 56 ಆಕೆಯ ತಂದೆತಾಯಿಗಳು ಬೆರಗಾದರು. ಆತನು, ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.