ಸತ್ತಹುಡುಗಿಯ ಮತ್ತು ರಕ್ತಕುಸುಮ ರೋಗಿಯ ಸ್ವಸ್ಥತೆ
21 ಯೇಸು ತಿರುಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು. 22 ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು, 23 "ನನ್ನ ಚಿಕ್ಕ ಮಗಳು ಈಗ ಸಾವಿನ ಅಂಚಿನಲ್ಲಿದ್ದಾಳೆ; ಆಕೆಯು ಗುಣಹೊಂದಿ ಬದುಕುವಂತೆ ದಯಮಾಡಿ ನೀನು ಬಂದು ಆಕೆಯ ಮೇಲೆ ನಿನ್ನ ಕೈಯಿಡಬೇಕು" ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು. 24 ಯೇಸುವು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕುತ್ತಾ ಹಿಂಬಾಲಿಸಿದರು.
25 ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು. 26 ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ.
27,28 ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, "ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು" ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. 29 ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು.
30 ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, "ನನ್ನ ಉಡುಪನ್ನು ಮುಟ್ಟಿದವರು ಯಾರು?" ಎಂದು ಕೇಳಲು 31 ಆತನ ಶಿಷ್ಯರು ಆತನಿಗೆ, "ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?" ಎಂದರು. 32 ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ,
33 ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. 34 ಆತನು ಆಕೆಗೆ, "ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ" ಎಂದು ಹೇಳಿದನು.
35 ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, "ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?" ಅಂದರು.
36 ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, "ಅಂಜಬೇಡ, ನಂಬಿಕೆ ಮಾತ್ರ ಇರಲಿ" ಎಂದು ಹೇಳಿದನು. 37 ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ. 38 ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು.
39 ಆತನು ಒಳಕ್ಕೆ ಹೋಗಿ, "ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ" ಅನ್ನಲು, 40 ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ,
41 ಅವಳ ಕೈಹಿಡಿದು, "ತಲಿಥಾಕೂಮ್" ಅಂದನು. ಈ ಮಾತಿಗೆ 5:41 ಚಿಕ್ಕ ಹುಡುಗಿ ಎಂದು ಅರ್ಥ. "ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ" ಎಂದರ್ಥ. 42 ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರ್ಷ ವಯಸ್ಸಿನವಳು. 43 5:43 ಮಾರ್ಕ 2:12; ಲೂಕ 2:47:ಅವರೆಲ್ಲರೂ ಬಹಳ ಆಶ್ಚರ್ಯದಿಂದ ಬೆರಗಾದರು. ಆ ಮೇಲೆ ಆತನು ಅವರಿಗೆ, ಇದು ಯಾರಿಗೂ ತಿಳಿಯಬಾರದೆಂದು ಕಟ್ಟಪ್ಪಣೆ ಮಾಡಿದನು. ಆ ಹುಡುಗಿಗೆ ಊಟ ಮಾಡಲು ಏನಾದರೂ ಕೊಡಿರಿ ಎಂದು ಹೇಳಿದನು.