ಯೇಸು ನಾಲ್ಕುಸಾವಿರ ಜನರಿಗೆ ಊಟಮಾಡಿಸಿದ್ದು
1 ಆ ದಿನಗಳಲ್ಲಿ ಜನರು ಪುನಃ ದೊಡ್ಡಗುಂಪಾಗಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು, 2 "ಈ ಜನರನ್ನು ನೋಡಿ ಕನಿಕರಪಡುತ್ತೇನೆ, ಏಕೆಂದರೆ ಮೂರು ದಿನಗಳಿಂದ ಇವರು ನನ್ನ ಬಳಿಯಲ್ಲಿದ್ದಾರೆ; ಇವರಿಗೆ ಊಟಕ್ಕೆ ಏನೂ ಇಲ್ಲ. 3 ಇವರನ್ನು ಹಸಿವೆಯಿಂದ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ" ಎಂದು ಅವರಿಗೆ ಹೇಳಿದನು. 4 ಅದಕ್ಕೆ ಶಿಷ್ಯರು, "ಈ ಅಡವಿಯಲ್ಲಿ ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸುವುದಕ್ಕಾದೀತು?" ಅಂದರು. 5 ಆತನು, "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?" ಎಂದು ಅವರನ್ನು ಕೇಳಿದ್ದಕ್ಕೆ ಅವರು, "ಏಳು ರೊಟ್ಟಿಗಳು ಇವೆ" ಅಂದರು. 6 ಆಗ ಯೇಸು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. 7 ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು. 8 ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. 9 ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.