ಅಧಿಕಾರಸ್ಥರು ಯೇಸುವನ್ನು ಕೊಲ್ಲಬೇಕೆಂದು ಆಲೋಚಿಸಿದ್ದು
1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, "ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ; 2 ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು" ಎಂದು ಹೇಳಿದನು.
3 ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು 4 ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು. 5 "ಆದರೂ ಹಬ್ಬದಲ್ಲಿ26:5 ಪಸ್ಕ ಹಬ್ಬ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು" ಎಂದು ಮಾತನಾಡಿಕೊಂಡರು.
ಸ್ತ್ರೀಯು ಬೆಲೆಯುಳ್ಳ ತೈಲವನ್ನು ಆತನ ಮೇಲೆ ಹೊಯ್ಯಿದದ್ದು
6 ಯೇಸು ಬೇಥಾನ್ಯದಲ್ಲಿ ಸೀಮೋನನೆಂಬ ಕುಷ್ಠರೋಗಿಯ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಒಬ್ಬ ಸ್ತ್ರೀಯು 7 26:7 ಚಂದ್ರಕಾಂತಶಿಲೆಯ ಭರಣಿಯನ್ನುಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು. 8 ಶಿಷ್ಯರು ಇದನ್ನು ಕಂಡು ಕೋಪಗೊಂಡು, "ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ? 9 ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ" ಅಂದರು. 10 ಯೇಸು ಅದನ್ನು ತಿಳಿದು ಅವರಿಗೆ, "ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿದ್ದೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 11 ಬಡವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರಲ್ಲಾ, ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದು ನನ್ನ ಉತ್ತರಕ್ರಿಯೆಗಾಗಿಯೇ. 13 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲಾ ಈ ಸ್ತ್ರೀ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ" ಹೇಳುವರು.
ಇಸ್ಕರಿಯೋತನು ಯೇಸುವನ್ನು ಹಿಡಿದುಕೊಡಲು ಒಪ್ಪಿಕೊಂಡದ್ದು
14 ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ, 15 "ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?" ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು. 16 ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು.
ಯೇಸು ತನ್ನ ಶಿಷ್ಯರ ಸಂಗಡ ಕಡೆ ಭೋಜನ ಮಾಡಿದ್ದು
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, "ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ" ಎಂದು ಕೇಳಿದರು. 18 ಆತನು, "ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ" ಅಂದನು. 19 ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು.
20 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು. 21 ಅವರು ಊಟಮಾಡುತ್ತಿರುವಾಗ ಆತನು, "ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು" ಅಂದನು. 22 ಆಗ ಅವರು ಬಹಳ ದುಃಖಪಟ್ಟು, "ಕರ್ತನೇ, ನಾನಲ್ಲವಲ್ಲಾ?" ಎಂದು ಪ್ರತಿಯೊಬ್ಬರು ಕೇಳತೊಡಗಿದರು. 23 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು. 24 ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು" ಅಂದನು. 25 ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, "ಗುರುವೇ, ನಾನೋ?" ಎಂದು ಕೇಳಲು ಯೇಸು ಅವನಿಗೆ, "ನೀನೇ ಹಾಗೆ ಹೇಳಿದ್ದೀ" ಎಂದು ಹೇಳಿದನು. 26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, "ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ" ಅಂದನು. 27 ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, "ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, 28 ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ 26:28 ಹೊಸ ಒಡಂಬಡಿಕೆಯಒಡಂಬಡಿಕೆಯ ರಕ್ತ.