ಯೇಸು ಒಬ್ಬ ಹುಡುಗಿಯನ್ನು ಬದುಕಿಸಿದ್ದು; ಇನ್ನೂ ಕೆಲವು ಅದ್ಭುತಗಳನ್ನು ನಡೆಸಿದ್ದು
18 ಹೀಗೆ ಯೇಸು ಅವರೊಂದಿಗೆ ಮಾತನಾಡುತ್ತಿರುವಾಗ ಒಬ್ಬ ಅಧಿಕಾರಿಯು ಬಂದು ಆತನಿಗೆ ಅಡ್ಡಬಿದ್ದು, "ನನ್ನ ಮಗಳು ಈಗಲೇ ತೀರಿಹೋದಳು; ಆದಾಗ್ಯೂ ನೀನು ಬಂದು ಆಕೆಯ ಮೇಲೆ ಕೈ ಇಟ್ಟರೆ ಬದುಕುವಳು" ಎಂದು ಬೇಡಿಕೊಂಡನು. 19 ಯೇಸು ಎದ್ದು ಆ ಅಧಿಕಾರಿಯ ಹಿಂದೆ ಹೋಗುವಾಗ ಆತನ ಶಿಷ್ಯರು ಸಹ ಆತನನ್ನು ಹಿಂಬಾಲಿಸಿದರು.
20 ಆಗ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು, 21 "ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆ ಎಂದು ಮನಸ್ಸಿನಲ್ಲಿ" ಅಂದುಕೊಂಡು ಹಿಂದಿನಿಂದ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು. 22 ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, "ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು" ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು.
23 ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಕೊಳಲು ಊದುವವರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು ಅವರಿಗೆ, 24 "ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ" ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು. 25 ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು. 26 ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು.