11 ಅನಂತರ ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿನಗಳವರೆಗೂ ಇದ್ದೆನು. 12 ಆಮೇಲೆ ಯೆರೂಸಲೇಮಿಗಾಗಿ ಮಾಡತಕ್ಕ ಕಾರ್ಯದ ವಿಷಯವಾಗಿ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾನೆಂಬುದನ್ನು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆನು. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ. 13 ನಾನು ರಾತ್ರಿವೇಳೆಯಲ್ಲಿ ತಗ್ಗಿನ ಬಾಗಿಲಿನಿಂದ ಹೊರಟು ಹಾಳುಬಿದ್ದ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಿಲುಗಳನ್ನೂ ನೋಡುತ್ತಾ, ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆನು. 14 ಅಲ್ಲಿಂದ ಬುಗ್ಗೆ ಬಾಗಿಲನ್ನು ಹಾದು ಅರಸನ ಕೊಳಕ್ಕೆ ಬಂದೆನು. ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿರಲಿಲ್ಲ. 15 ಅದಕಾರಣ ನಾನು ರಾತ್ರಿಯಲ್ಲಿ ಹಳ್ಳದ ಬದಿಯ ಮಾರ್ಗವಾಗಿ ಹೋಗಿ ಗೋಡೆಯನ್ನು ಪರೀಕ್ಷಿಸಿದೆನು. ಆ ಮೇಲೆ ಪುನಃ ತಗ್ಗಿನ ಬಾಗಿಲಿನಿಂದ ಹಿಂತಿರುಗಿ ಮನೆಗೆ ಬಂದೆನು.
16 ನಾನು ಆ ವರೆಗೆ ಯೆಹೂದ್ಯರಿಗೂ, ಯಾಜಕರಿಗೂ, ಶ್ರೀಮಂತರಿಗೂ, ಅಧಿಕಾರಿಗಳಿಗೂ ಕೆಲಸ ಮಾಡುವ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ ನಾನು ಎಲ್ಲಿ ಹೋಗಿದ್ದೆನು, ಏನು ಮಾಡಿದೆನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.