8 ಅವರಿಗೆ, "ನೀವು ತಿರುಗಿ ನಿಮ್ಮ ನಿಮ್ಮ ತವರುಮನೆಗಳಿಗೆ ಹೋಗಿರಿ, ನೀವು ನನ್ನನ್ನೂ, ಮರಣಹೊಂದಿದ ನನ್ನ ಮಕ್ಕಳನ್ನು ಪ್ರೀತಿಸಿದಂತೆ ಯೆಹೋವನು ನಿಮ್ಮನ್ನು ಪ್ರೀತಿಸಿ ನಿಮಗೆ ಕೃಪೆತೋರಿಸಲಿ. 9 ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿರುವಂತೆ ಯೆಹೋವನು ಅನುಗ್ರಹಿಸಲಿ" ಎಂದು ಹೇಳಿ ಅವರಿಗೆ ಮುದ್ದಿಟ್ಟಳು. 10 ಆಗ ಅವರು ಬಹಳ ದುಃಖದಿಂದ ಗಟ್ಟಿಯಾಗಿ ಅತ್ತು ನಾವೂ ನಿನ್ನ ಜೊತೆಯಲ್ಲೇ ನಿನ್ನ ಸ್ವಜನರ ಬಳಿಗೆ ಬರುತ್ತೇವೆ ಅನ್ನಲು, 11 ಆಕೆಯು, "ನನ್ನ ಮಕ್ಕಳೇ, ನೀವು ನನ್ನೊಡನೆ ಬರುವುದೇಕೆ? ಹಿಂದಿರುಗಿ ಹೋಗಿರಿ. ನಿಮಗೆ ಗಂಡಂದಿರನ್ನು ಕೊಡುವುದಕ್ಕೆ ನನ್ನ ಗರ್ಭದಲ್ಲಿ ಬೇರೆ ಮಕ್ಕಳಿಲ್ಲವಲ್ಲಾ. 12 ನಾನು ಮತ್ತೊಬ್ಬನನ್ನು ಪುನಃ ಮದುವೆಮಾಡಿಕೊಳ್ಳುವ ಪ್ರಾಯವೂ ನನಗೆ ದಾಟಿಹೋಗಿದೆ. ಆದುದರಿಂದ ನನ್ನ ಮಕ್ಕಳೇ, ನೀವು ಹಿಂದಿರುಗಿ ಹೋಗಿರಿ. ಒಂದು ವೇಳೆ ಆ ನಿರೀಕ್ಷೆಯಿಂದ ಈ ಹೊತ್ತೇ ನಾನು ಪುನಃ ಮದುವೆಯಾಗಿ ಮಕ್ಕಳನ್ನು ಹೆತ್ತರೂ, 13 ಅವರು ದೊಡ್ಡವರಾಗುವ ತನಕ ನೀವು ಕಾದಿರುವಿರೋ? ಅಲ್ಲಿಯ ವರೆಗೂ ಗಂಡಂದಿರಿಲ್ಲದೆ ಇರುವಿರೋ? ನನ್ನ ಮಕ್ಕಳೇ, ಹಾಗೆ ಮಾಡಬೇಡಿರಿ; ಯೆಹೋವನ ಹಸ್ತವು ನನ್ನಿಂದ ದೂರವಾಗಿರುವುದರಿಂದ ನಾನು ನಿಮಗಿಂತ ಹೆಚ್ಚಾಗಿ ದುಃಖಪಡುತ್ತೇನೆ" ಅಂದಳು. 14 ಆಗ ಅವರು ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು. ಒರ್ಫಳು ಅತ್ತೆಯನ್ನು ಮುದ್ದಿಟ್ಟು ಹೊರಟು ತನ್ನ ತವರಿಗೆ ಹೋದಳು; ರೂತಳಾದರೋ ಅತ್ತೆಯನ್ನು ತೊರೆದುಹೋಗದೆ ಅವಳೊಂದಿಗೆ ಇದ್ದಳು.