13 ಬೋವಜನು ರೂತಳನ್ನು ಹೆಂಡತಿಯನ್ನಾಗಿ ಪರಿಗ್ರಹಿಸಿದ್ದರಿಂದ ಆಕೆಯು ಯೆಹೋವನ ಅನುಗ್ರಹದಿಂದ ಗರ್ಭಿಣಿಯಾಗಿ ಮಗನನ್ನು ಹೆತ್ತಳು. 14 ಆಗ ಹೆಂಗಸರು ನವೊಮಿಗೆ "ಈ ಹೊತ್ತು ನಿನಗೆ ಬಾಧ್ಯಸ್ಥನನ್ನು ದಯಪಾಲಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಈ ಮಗನು ಇಸ್ರಾಯೇಲ್ಯರಲ್ಲಿ ಪ್ರಖಾತ್ಯನಾಗಲಿ. 15 ಇವನು ನಿನಗೆ ನವಚೈತನ್ಯ ನೀಡಿ ಪುನರ್ಜನ್ಮ ಹೊಂದುವಂತೆ ಮಾಡುವನು, ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಕನಾಗಿರುವನು. ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾ ಏಳು ಮಂದಿ ಮಕ್ಕಳಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿ ಗೌರವಿಸುವ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ" ಎಂದು ಹೇಳಿದರು.
16 ನವೊಮಿಯೇ ಆ ಮಗುವನ್ನು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದಳು. 17 ನೆರೆಹೊರೆಯ ಹೆಂಗಸರು ನವೊಮಿಗೆ "ಒಬ್ಬ ಮಗನು ಹುಟ್ಟಿದ್ದಾನೆಂದು" ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ಇಷಯನಿಗೆ ತಂದೆಯೂ, ದಾವೀದನಿಗೆ ಅಜ್ಜನೂ ಆದನು.
ದಾವೀದನ ವಂಶಾವಳಿ
18 ಪೆರೆಚನ ವಂಶಾವಳಿ: ಪೆರೆಚನು ಹೆಚ್ರೋನನನ್ನು ಪಡೆದನು; 19 ಹೆಚ್ರೋನನು ರಾಮನನ್ನು ಪಡೆದನು; ರಾಮನು ಅಮ್ಮೀನಾದಾಬನನ್ನು ಪಡೆದನು; 20 ಅಮ್ಮೀನಾದಾಬನು ನಹಶೋನನನ್ನು ಪಡೆದನು; ನಹಶೋನನು ಸಲ್ಮೋನನನ್ನು ಪಡೆದನು; 21 ಸಲ್ಮೋನನು ಬೋವಜನನ್ನು ಪಡೆದನು; ಬೋವಜನು ಓಬೇದನನ್ನು ಪಡೆದನು; 22 ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.