ಒಂದೇ ದೇಹ ಅನೇಕ ಅಂಗಗಳು
12 ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ. 13 ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ಒಂದೇ ದೇಹವಾಗುವಂತೆ, ನಾವೆಲ್ಲರೂ ಒಬ್ಬರೇ ಆತ್ಮದಿಂದ ಸ್ನಾನ ಮಾಡಿಸಿಕೊಂಡೆವು. ನಮ್ಮೆಲ್ಲರಿಗೂ ಒಬ್ಬ ಆತ್ಮವನ್ನು ಪಾನವಾಗಿ ಕೊಡಲಾಗಿದೆ. 14 ದೇಹವು ಒಂದೇ ಅಂಗವಾಗಿರದೆ, ಅನೇಕ ಅಂಗಗಳುಳ್ಳದ್ದಾಗಿದೆ.
15 ಒಂದು ವೇಳೆ ಕಾಲು, "ನಾನು ಕೈಯಲ್ಲದ ಕಾರಣ, ದೇಹಕ್ಕೆ ಸೇರಿಲ್ಲ," ಎಂದು ಹೇಳಿದರೂ, ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? 16 ಒಂದು ವೇಳೆ ಕಿವಿ, "ನಾನು ಕಣ್ಣಲ್ಲದ ಕಾರಣ, ದೇಹಕ್ಕೆ ಸೇರಿಲ್ಲ," ಎಂದು ಹೇಳಿದರೂ ಅದು ದೇಹಕ್ಕೆ ಅಂಗವಾಗಿ ಸೇರದಿರುವುದೇ? 17 ದೇಹವೆಲ್ಲಾ ಕಣ್ಣಾದರೆ ನಾವು ಕೇಳುವುದೆಲ್ಲಿ? ಅಥವಾ ಅದೆಲ್ಲಾ ಕಿವಿಯಾದರೆ, ಮೂಸಿ ನೋಡುವುದೆಲ್ಲಿ? 18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತಮ್ಮ ಇಷ್ಟದ ಪ್ರಕಾರ ದೇಹದಲ್ಲಿ ಇಟ್ಟಿದ್ದಾರೆ. 19 ಅವೆಲ್ಲವೂ ಒಂದೇ ಅಂಗವಾಗಿದ್ದರೆ, ಆಗ ದೇಹವೆಲ್ಲಿ? 20 ಹೀಗೆ ಅಂಗಗಳು ಅನೇಕವಾಗಿದ್ದರೂ, ದೇಹ ಮಾತ್ರ ಒಂದೇ.
21 ಕಣ್ಣು ಕೈಗೆ, "ನೀನು ನನಗೆ ಅವಶ್ಯವಿಲ್ಲ!" ಎಂದು ಹೇಳಲಾಗದು. ತಲೆಯು ಕಾಲುಗಳಿಗೆ, "ನೀನು ನನಗೆ ಅವಶ್ಯವಿಲ್ಲ!" ಎಂದು ಹೇಳಲಾಗದು. 22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ. 23 ಕಡಿಮೆ ಗೌರವವುಳ್ಳವುಗಳೆಂದು ಯೋಚಿಸುವವುಗಳನ್ನು ವಿಶೇಷ ಗೌರವದಿಂದ ನೋಡುತ್ತೇವೆ. ಬಹಿರಂಗಪಡಿಸದ ಅಂಗಗಳನ್ನು ವಿಶೇಷ ಮರ್ಯಾದೆಯಿಂದ ಸಂರಕ್ಷಿಸುತ್ತೇವೆ. 24 ನಾವು ಬಾಹ್ಯ ಅಂಗಗಳಿಗೆ ಹೆಚ್ಚಿನ ವಿಶೇಷತೆಯನ್ನು ಕೊಡುವುದಿಲ್ಲ. ಆದರೆ ಗೌರವ ಕಡಿಮೆಯಿರುವ ಅಂಗಗಳಿಗೆ, ದೇವರು ಹೆಚ್ಚು ಗೌರವವನ್ನು ಕೊಡುವಂತೆ, ಎಲ್ಲಾ ಅಂಗಗಳನ್ನು ಒಟ್ಟಾಗಿ ದೇಹದಲ್ಲಿಟ್ಟಿದ್ದಾರೆ. 25 ಹೀಗೆ ದೇವರು ದೇಹದಲ್ಲಿ ಭಿನ್ನಭೇದವಿಲ್ಲದೇ, ಎಲ್ಲವೂ ಒಂದಕ್ಕೊಂದು ಪರಸ್ಪರ ಚಿಂತಿಸುವುದಾಗಿ ಕೂಡಿ ಹೋಗುವಂತೆ ಸಮಾನವಾಗಿ ಮಾಡಿದ್ದಾರೆ. 26 ದೇಹದ ಒಂದು ಅಂಗ ಬಾಧೆಪಟ್ಟರೆ, ಎಲ್ಲಾ ಅಂಗಗಳು ಬಾಧೆಪಡುತ್ತದೆ. ಒಂದು ಅಂಗಕ್ಕೆ ಗೌರವ ದೊರೆತರೆ, ಅದರೊಂದಿಗೆ ಪ್ರತಿಯೊಂದು ಅಂಗವೂ ಆನಂದಪಡುತ್ತವೆ.
27 ಈಗ ನೀವು ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಆ ದೇಹದ ಅಂಗಗಳಾಗಿದ್ದೀರಿ.