ಎಲೀಯನು ಹೋರೇಬಿಗೆ ಓಡಿಹೋದದ್ದು
1 ಎಲೀಯನು ಮಾಡಿದ್ದೆಲ್ಲವನ್ನೂ, ಅವನು ಖಡ್ಗದಿಂದ ಎಲ್ಲಾ ಪ್ರವಾದಿಗಳನ್ನು ಕೊಂದು ಹಾಕಿದ್ದೆಲ್ಲವನ್ನೂ, ಅಹಾಬನು ಈಜೆಬೆಲಳಿಗೆ ತಿಳಿಸಿದಾಗ, 2 ಈಜೆಬೆಲಳು ಎಲೀಯನ ಬಳಿಗೆ ದೂತನನ್ನು ಕಳುಹಿಸಿ, "ನಾನು ನಾಳೆ ಇಷ್ಟು ಹೊತ್ತಿಗೆ ಅವರಲ್ಲಿರುವ ಒಬ್ಬೊಬ್ಬನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ, ದೇವರುಗಳು ನನಗೆ ಬೇಕಾದದ್ದನ್ನು ಮಾಡಲಿ," ಎಂದು ಹೇಳಿದಳು.
3 ಅವನು ಅದನ್ನು ಕೇಳಿ ಎದ್ದು, ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ, ಅಲ್ಲಿ ತನ್ನ ಸೇವಕನನ್ನು ಕಳುಹಿಸಿಬಿಟ್ಟನು. 4 ಆದರೆ ಅವನು ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತು, ತಾನು ಸಾಯಬೇಕೆಂದು ಅಪೇಕ್ಷಿಸಿ, "ಯೆಹೋವ ದೇವರೇ, ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಕೋ. ಏಕೆಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ," ಎಂದನು. 5 ಅವನು ಜಾಲೀಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು.
ಆಗ ಒಬ್ಬ ದೂತನು ಅವನನ್ನು ತಟ್ಟಿ, ಅವನಿಗೆ, "ಎದ್ದು ತಿನ್ನು," ಎಂದನು. 6 ಅವನು ಎದ್ದು ನೋಡಿದಾಗ, ಇಗೋ, ಕೆಂಡದಲ್ಲಿ ಬೇಯಿಸಿದ ರೊಟ್ಟಿಯೂ ಒಂದು ತಂಬಿಗೆ ನೀರೂ ಅವನ ತಲೆಯ ಕಡೆಗೆ ಇತ್ತು. ಆಗ ಅವನು ತಿಂದು, ಕುಡಿದು ತಿರುಗಿ ಮಲಗಿಕೊಂಡನು.
7 ತಿರುಗಿ ಎರಡನೆಯ ಸಾರಿ ಯೆಹೋವ ದೇವರ ದೂತನು ಬಂದು, ಅವನನ್ನು ತಟ್ಟಿ ಅವನಿಗೆ, "ನೀನೆದ್ದು ತಿನ್ನು, ಏಕೆಂದರೆ ನೀನು ಬಹುದೂರ ಪ್ರಯಾಣ ಮಾಡಬೇಕಾಗಿದೆ," ಎಂದನು. 8 ಆಗ ಅವನೆದ್ದು ತಿಂದು, ಕುಡಿದು ಆ ಭೋಜನದ ಶಕ್ತಿಯಿಂದ ರಾತ್ರಿ ಹಗಲು ನಾಲ್ವತ್ತು ದಿವಸ ಹೋರೇಬ್ ಎಂಬ ದೇವರ ಬೆಟ್ಟದವರೆಗೂ ನಡೆದನು.