ದಾವೀದನು ಸೊಲೊಮೋನನಿಗೆ ಹೇಳಿದ ಕಡೆಯ ಮಾತುಗಳು
1 ಆದರೆ ದಾವೀದನ ಸಾಯುವ ಕಾಲ ಸಮೀಪಿಸಿದ್ದರಿಂದ ಅವನು ತನ್ನ ಮಗ ಸೊಲೊಮೋನನಿಗೆ ಆಜ್ಞಾಪಿಸಿದ್ದೇನೆಂದರೆ,
2 "ಭೂಮಿಯಲ್ಲಿರುವವರೆಲ್ಲರು ಹೋಗುವ ಮಾರ್ಗವಾಗಿ ನಾನು ಹೋಗುತ್ತೇನೆ. ನೀನು ಬಲಗೊಂಡು ಶೂರನಾಗಿರು. 3 ನಿನ್ನ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಅನುಸರಿಸಿ ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ನಿಯಮದಲ್ಲಿ ಬರೆದಿರುವ ಅವರ ಆಜ್ಞಾನಿಯಮಗಳಿಗೂ, ವಿಧಿನಿರ್ಣಯಗಳಿಗೂ ವಿಧೇಯನಾಗಿರು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ, ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿಯೂ ಯಶಸ್ವಿಯಾಗುವೆ. 4 ಯೆಹೋವ ದೇವರು, ‘ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ನನ್ನ ಮುಂದೆ ನಂಬಿಗಸ್ತರಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಅವರು ಇಸ್ರಾಯೇಲಿನ ಸಿಂಹಾಸನದ ಮೇಲೆ ತಪ್ಪದೇ ಕುಳಿತುಕೊಳ್ಳುವರು,’ ಎಂದು ನನಗೆ ಹೇಳಿದ ತಮ್ಮ ವಾಕ್ಯವನ್ನು ಸ್ಥಿರಪಡಿಸುವರು.