1 ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ, ಅರಸನಾದ ಸೊಲೊಮೋನನು ಇಸ್ರಾಯೇಲರಲ್ಲಿ ಶ್ರೇಷ್ಠರಾಗಿರುವ ಪಿತೃಗಳಾದ ಇಸ್ರಾಯೇಲಿನ ಹಿರಿಯರನ್ನೂ, ಗೋತ್ರಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು. 2 ಯಥನಿಮ8:2 ಯಥನಿಮ ಅರ್ಥ ಆಶ್ವೀಜ ಮಾಸ ತಿಂಗಳಲ್ಲಿ ಹಬ್ಬವಿದ್ದಾಗ, ಇಸ್ರಾಯೇಲಿನ ಸಮಸ್ತ ಜನರು ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು.
3 ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಯೆಹೋವ ದೇವರ ಮಂಜೂಷವನ್ನು ಎತ್ತಿಕೊಂಡು, 4 ದೇವದರ್ಶನದ ಗುಡಾರವನ್ನೂ, ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಲಕರಣೆಗಳನ್ನೂ ತಂದರು. ಇವುಗಳನ್ನು ಯಾಜಕರೂ, ಲೇವಿಯರೂ ಹೊತ್ತುಕೊಂಡು ಬಂದರು. 5 ಆಗ ಅರಸನಾದ ಸೊಲೊಮೋನನೂ, ಅವನ ಬಳಿಯಲ್ಲಿ ಕೂಡಿದ ಇಸ್ರಾಯೇಲ್ ಜನರೆಲ್ಲರೂ ಮಂಜೂಷದ ಮುಂದೆ ನಿಂತು ಎಣಿಸಲಾಗದಷ್ಟು ಕುರಿಗಳನ್ನೂ ಪಶುಗಳನ್ನೂ ಬಲಿಯಾಗಿ ಅರ್ಪಿಸಿದರು.
6 ಯಾಜಕರು ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳದಲ್ಲಿ ಇಟ್ಟರು. 7 ಕೆರೂಬಿಗಳು ಮಂಜೂಷವಿದ್ದ ಸ್ಥಳದ ಮೇಲೆ ತಮ್ಮ ರೆಕ್ಕೆಗಳನ್ನು ಚಾಚಿಕೊಂಡಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ, ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿಕೊಂಡಿದ್ದವು. 8 ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಮುಂಭಾಗದಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು, ಆದರೆ ಅವು ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇವೆ. 9 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಬಂದ ನಂತರ ಯೆಹೋವ ದೇವರು ಅವರ ಸಂಗಡ ಒಡಂಬಡಿಕೆ ಮಾಡಿದಾಗ, ಮೋಶೆಯು ಹೋರೇಬ್ ಬೆಟ್ಟದ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.
10 ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ, ಮೇಘವು ಯೆಹೋವ ದೇವರ ಮಂದಿರವನ್ನು ತುಂಬಿತ್ತು. 11 ಯೆಹೋವ ದೇವರ ತೇಜಸ್ಸಿನಿಂದ ವ್ಯಾಪಿಸಿದ್ದ ಆ ಮೋಡವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.