ಮೇಲ್ವಿಚಾರಕರೂ ಸಭಾಸೇವಕರೂ
1 ಸಭೆಯ ಮೇಲ್ವಿಚಾರಕನಾಗಲು ಬಯಸುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ. 2 ಸಭೆಯ ಮೇಲ್ವಿಚಾರಕನು ನಿಂದಾರಹಿತನಾಗಿ, ಏಕಪತ್ನಿಯುಳ್ಳವನೂ ಜಿತೇಂದ್ರಿಯನೂ ಸ್ವಸ್ಥಚಿತ್ತನೂ ಗೌರವಸ್ಥನೂ ಅತಿಥಿ ಸತ್ಕಾರ ಮಾಡುವವನೂ ಬೋಧಿಸುವುದರಲ್ಲಿ ಪ್ರವೀಣನೂ ಆಗಿರಬೇಕು. 3 ಅವನು ಮದ್ಯಪಾನ ಮಾಡುವವನಾಗಿರಬಾರದು, ಹೊಡೆದಾಡುವವನಾಗಿರಬಾರದು. ಆದರೆ ಸಾತ್ವಿಕನೂ ಕುತರ್ಕ ಮಾಡದವನೂ ಹಣದಾಶೆಯಿಲ್ಲದವನೂ ಆಗಿರಬೇಕು. 4 ಪೂರ್ಣ ಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು. 5 ಸ್ವಂತ ಮನೆಯವರನ್ನು ಆಳುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಮರಿಸುವನು? 6 ಅವನು ಹೊಸದಾಗಿ ವಿಶ್ವಾಸಕ್ಕೆ ಬಂದವನಾಗಿರಬಾರದು. ಅಂಥವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಬಲಿಬೀಳುವನು. 7 ಇದಲ್ಲದೆ ಅವನು ನಿಂದೆಗೆ ಗುರಿಯಾಗದವನೂ ಸೈತಾನನ ಉರುಲಿಗೆ ಸಿಕ್ಕಿ ಬೀಳದವನೂ ಆಗಿದ್ದಾನೆಂಬ ಒಳ್ಳೆಯ ಸಾಕ್ಷಿಯನ್ನು ಹೊಂದಿದವನಾಗಿರಬೇಕು.