ಪುನರುತ್ಥಾನದ ನಿರೀಕ್ಷೆ
13 ಪ್ರಿಯರೇ, ನೀವು ನಿರೀಕ್ಷೆಯಿಲ್ಲದೆ ಗೋಳಾಡುವವರಂತೆ ಮರಣ ಹೊಂದಿದ ವಿಶ್ವಾಸಿಗಳ ಬಗ್ಗೆ ಅಜ್ಞಾನಿಗಳಾಗಿರಬಾರದೆಂದು ನಾವು ಅಪೇಕ್ಷಿಸುತ್ತೇವೆ. 14 ಏಕೆಂದರೆ ಯೇಸು ಸತ್ತು ಪುನಃ ಜೀವಂತವಾಗಿ ಎದ್ದರೆಂದು ನಾವು ನಂಬಿದರೆ, ಅದರಂತೆ ಯೇಸುವಿನಲ್ಲಿ ನಿದ್ರೆಹೋದವರನ್ನು ಸಹ ದೇವರು ಅವರೊಡನೆ ಕರೆದುಕೊಂಡು ಬರುವರು. 15 ಕರ್ತ ಯೇಸುವಿನ ಪುನರಾಗಮನದವರೆಗೆ ಇನ್ನೂ ಜೀವದಿಂದ ಉಳಿದಿರುವ ನಾವು ಮರಣಹೊಂದಿದವರಿಗಿಂತ ಮುಂದಾಗಿ ಪುನರುತ್ಥಾನವಾಗುವುದಿಲ್ಲ ಎಂದು, ನಾವು ಕರ್ತ ಯೇಸುವಿನ ವಾಕ್ಯದ ಆಧಾರದಿಂದ ನಿಮಗೆ ಹೇಳುತ್ತಿದ್ದೇವೆ. 16 ಏಕೆಂದರೆ ಕರ್ತ ಯೇಸು ತಾವೇ ಆಜ್ಞಾಘೋಷದೊಡನೆಯೂ ಪ್ರಧಾನ ದೇವದೂತನ ಧ್ವನಿಯೊಡನೆಯೂ ದೇವರ ತುತೂರಿಯೊಡನೆಯೂ ಪರಲೋಕದಿಂದ ಇಳಿದು ಬರುವರು. ಆಗ ಕ್ರಿಸ್ತ ಯೇಸುವಿನಲ್ಲಿ ಸತ್ತವರು ಮೊದಲು ಎದ್ದು ಬರುವರು. 17 ಆಮೇಲೆ, ಜೀವದಿಂದ ಉಳಿದಿರುವ ನಾವು ಅವರೊಂದಿಗೆ ಅಂತರಿಕ್ಷದಲ್ಲಿ ಕರ್ತ ಯೇಸುವನ್ನು ಎದುರುಗೊಳ್ಳುವುದಕ್ಕಾಗಿ ಮೇಘಗಳಲ್ಲಿ ಒಯ್ಯಲಾಗುವೆವು. ಹೀಗೆ ನಾವು ಸದಾಕಾಲವೂ ಕರ್ತ ಯೇಸುವಿನ ಜೊತೆಯಲ್ಲಿಯೇ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.