17 ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು. 18 ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ: 19 ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ. 20 ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ. 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.
Publicidade