ಉದಾರತೆಗೆ ಪ್ರೋತ್ಸಾಹ
1 ಪ್ರಿಯರೇ, ಮಕೆದೋನ್ಯದಲ್ಲಿರುವ ಸಭೆಗಳಿಗೆ ದೇವರು ಕೊಟ್ಟಿರುವ ಕೃಪೆಯನ್ನು ಕುರಿತು ನೀವು ತಿಳಿದಿರಬೇಕೆಂದು ನಮ್ಮ ಅಪೇಕ್ಷೆ. 2 ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ. 3 ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. 4 ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು. 5 ಇವೆಲ್ಲವನ್ನೂ ನಾವು ನೆನಸಿದ್ದಕ್ಕಿಂತಲೂ ಅವರು ಹೆಚ್ಚಾಗಿಯೇ ಮಾಡಿದರು. ಹೇಗೆಂದರೆ ಮೊದಲು ಅವರು ತಮ್ಮನ್ನೇ ಕರ್ತ ಯೇಸುವಿಗೆ ಒಪ್ಪಿಸಿಕೊಟ್ಟರು. ಅನಂತರ ದೇವರ ಚಿತ್ತಾನುಸಾರವಾಗಿ ತಮ್ಮನ್ನು ನಮಗೂ ಒಪ್ಪಿಸಿಕೊಟ್ಟರು.