ಹಿಜ್ಕೀಯನ ಅಸ್ವಸ್ಥತೆ
1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, "ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ," ಎಂದು ಹೇಳಿದನು.
2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ, 3 "ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ," ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು.
4 ಯೆಶಾಯನು ಅರಮನೆಯ ಆವರಣದ ಮಧ್ಯಕ್ಕೆ ಹೋಗುವ ಮುಂಚೆ ಯೆಹೋವ ದೇವರ ವಾಕ್ಯವು ಅವನಿಗೆ ಬಂದಿತು, 5 ದೇವರು ಅವನಿಗೆ, "ನೀನು ಹಿಂದಿರುಗಿ ಹೋಗಿ ನನ್ನ ಜನರ ನಾಯಕನಾದ ಹಿಜ್ಕೀಯನಿಗೆ, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ. ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆ.