ನಾಮಾನನ ಕುಷ್ಠರೋಗ ವಾಸಿಯಾದದ್ದು
1 ಅರಾಮಿನ ಅರಸನ ಸೈನ್ಯಾಧಿಪತಿ ನಾಮಾನನು ತನ್ನ ಯಜಮಾನನ ಮುಂದೆ ಮಹಾಪುರುಷನಾಗಿಯೂ, ಘನವುಳ್ಳವನಾಗಿಯೂ ಇದ್ದನು. ಏಕೆಂದರೆ ಅವನಿಂದ ಯೆಹೋವ ದೇವರು ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದರು. ಇದಲ್ಲದೆ ಅವನು ಪರಾಕ್ರಮಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾಗಿದ್ದನು.
2 ಅರಾಮಿನವರು ಗುಂಪುಗುಂಪಾಗಿ ಹೊರಟು, ಇಸ್ರಾಯೇಲ್ ದೇಶದಿಂದ ಒಬ್ಬ ಹುಡುಗಿಯನ್ನು ಸೆರೆಯಾಗಿ ಹಿಡಿದುಕೊಂಡು ಬಂದರು. ಅವಳು ನಾಮಾನನ ಹೆಂಡತಿಗೆ ಸೇವಕಿಯಾದಳು. 3 ಅವಳು ತನ್ನ ಯಜಮಾನನಿಗೆ, "ನನ್ನ ಧಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಬಳಿಯಲ್ಲಿರುತ್ತಿದ್ದರೆ, ಅವನು ಧಣಿಯ ಕುಷ್ಠರೋಗವನ್ನು ವಾಸಿಮಾಡುತ್ತಿದ್ದನು," ಎಂದಳು.
4 ನಾಮಾನನು ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತನ್ನ ಯಜಮಾನನಿಗೆ ತಿಳಿಸಿದನು. 5 ಅರಾಮ್ಯರ ಅರಸನು, "ನೀನು ಹೋಗಿ ಬಾ. ನಾನು ಇಸ್ರಾಯೇಲಿನ ಅರಸನಿಗೆ ಪತ್ರವನ್ನು ಕಳುಹಿಸುವೆನು," ಎಂದನು. ಅದರಂತೆ ನಾಮಾನನು 340 ಕಿಲೋಗ್ರಾಂ ಬೆಳ್ಳಿ, 64 ಕಿಲೋಗ್ರಾಂ ಬಂಗಾರ, ಹತ್ತು ಜೊತೆ ಬಟ್ಟೆಗಳನ್ನೂ ತೆಗೆದುಕೊಂಡು ಹೋದನು. 6 ಅವನು ಇಸ್ರಾಯೇಲಿನ ಅರಸನ ಬಳಿಗೆ ಆ ಪತ್ರವನ್ನು ತೆಗೆದುಕೊಂಡು ಬಂದನು. ಅದರಲ್ಲಿ, "ಈ ಪತ್ರ ನಿನಗೆ ಸೇರುವಾಗ, ನಿನ್ನ ಸೇವಕನಾದ ನಾಮಾನನ ಕುಷ್ಠರೋಗವನ್ನು ವಾಸಿಮಾಡುವ ಹಾಗೆ ನಿನ್ನ ಬಳಿಗೆ ಕಳುಹಿಸಿದ್ದೇನೆ," ಎಂದು ಬರೆದಿತ್ತು.
7 ಇಸ್ರಾಯೇಲಿನ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು, "ಕೊಲ್ಲುವುದಕ್ಕೂ, ಬದುಕಿಸುವುದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ವಾಸಿ ಮಾಡುವುದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧವಾಗಿ ಜಗಳಕ್ಕೆ ಕಾರಣ ಹುಡುಕುವುದನ್ನು ನೀವೇ ನೋಡಿರಿ," ಎಂದನು.
8 ಇಸ್ರಾಯೇಲಿನ ಅರಸನು ತನ್ನ ವಸ್ತ್ರಗಳನ್ನು ಹರಿದುಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ, "ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ನಾಮಾನನು ತಿಳಿದುಕೊಳ್ಳುವಂತೆ ಅವನು ನನ್ನ ಬಳಿಗೆ ಬರಲಿ," ಎಂದು ಅರಸನಿಗೆ ಹೇಳಿ ಕಳುಹಿಸಿದನು. 9 ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗಡ, ತನ್ನ ರಥದ ಸಂಗಡ ಬಂದು, ಎಲೀಷನ ಮನೆಯ ಬಾಗಿಲ ಬಳಿಯಲ್ಲಿ ನಿಂತನು. 10 ಆಗ ಎಲೀಷನು, "ನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನಮಾಡು, ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪಡುವುದು, ನೀನು ಶುದ್ಧನಾಗುವೆ," ಎಂದು ಹೇಳಲು, ಅವನ ಬಳಿಗೆ ಸೇವಕನನ್ನು ಕಳುಹಿಸಿದನು.
11 ಆಗ ನಾಮಾನನು ಕೋಪಗೊಂಡು ಹೊರಟುಹೋಗಿ, "ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು, ತನ್ನ ದೇವರಾದ ಯೆಹೋವ ದೇವರ ಹೆಸರನ್ನು ಕರೆದು, ನನ್ನ ಚರ್ಮದ ಮೇಲೆ ತನ್ನ ಕೈಯನ್ನಾಡಿಸಿ, ಕುಷ್ಠರೋಗವನ್ನು ವಾಸಿಮಾಡುವನೆಂದು, ನಾನು ನೆನಸಿದೆ. 12 ನಾನು ಹೊಳೆಗಳಲ್ಲಿ ಸ್ನಾನಮಾಡಿ ಶುದ್ಧನಾಗುವಂತೆ ದಮಸ್ಕದ ನದಿಗಳಾದ ಅಬಾನಾವೂ, ಪಾರ್ಪರೂ ಇಸ್ರಾಯೇಲಿನ ಸಮಸ್ತ ನೀರುಗಳಿಗಿಂತ ಉತ್ತಮವಾಗಿಲ್ಲವೋ?" ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು.
13 ಆದರೆ ನಾಮಾನನ ಸೇವಕನು ಅವನ ಬಳಿಗೆ ಬಂದು, ಅವನ ಸಂಗಡ ಮಾತನಾಡಿ, "ನನ್ನ ತಂದೆಯೇ, ಪ್ರವಾದಿಯು ದೊಡ್ಡ ಕಾರ್ಯವನ್ನು ನಿನಗೆ ಹೇಳಿದ್ದರೆ, ನೀನು ಮಾಡುತ್ತಿದ್ದಿಲ್ಲವೋ? ಅವನು ನಿನಗೆ, ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರಲ್ಲಿ ಅಡ್ಡಿ ಏನು?" ಎಂದನು. 14 ಆಗ ಅವನು ಇಳಿದು ಹೋಗಿ ದೇವರ ಮನುಷ್ಯನ ಮಾತಿನ ಪ್ರಕಾರ ಯೊರ್ದನಿನಲ್ಲಿ ಏಳು ಸಾರಿ ಮುಳುಗಿದನು. ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು, ಅವನು ಶುದ್ಧನಾದನು.