5 ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.
6 ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು. 7 ಫಕ್ಕನೆ ದೇವದೂತನೊಬ್ಬನು ಪ್ರತ್ಯಕ್ಷನಾಗಲು ಕೋಣೆಯೆಲ್ಲಾ ಪ್ರಕಾಶಮಯವಾಯಿತು. ಅವನು ಪೇತ್ರನನ್ನು ತಟ್ಟಿ ಎಬ್ಬಿಸಿ, "ಬೇಗ ಎದ್ದೇಳು!" ಎಂದನು. ಪೇತ್ರನ ಕೈಗಳಿಗೆ ಬಂಧಿಸಿದ್ದ ಸರಪಣಿಗಳು ಕಳಚಿಬಿದ್ದವು.
8 "ನಿನ್ನ ಬಟ್ಟೆಗಳನ್ನೂ ಮೆಟ್ಟುಗಳನ್ನೂ ಧರಿಸಿಕೋ," ಎಂದು ದೇವದೂತನು ಅವನಿಗೆ ಹೇಳಲು, ಪೇತ್ರನು ಅದರಂತೆ ಮಾಡಿದನು. "ನಿನ್ನ ನಿಲುವಂಗಿಯನ್ನು ಸುತ್ತಿಕೊಂಡು ನನ್ನನ್ನು ಹಿಂಬಾಲಿಸು," ಎಂದು ದೇವದೂತನು ಹೇಳಿದನು. 9 ಪೇತ್ರನು ಸೆರೆಮನೆಯಿಂದ ಹೊರಗೆ ಅವನನ್ನು ಹಿಂಬಾಲಿಸಿ ಹೊರಟನು. ದೇವದೂತನು ಮಾಡುತ್ತಿರುವುದು ನಿಜವಾಗಿಯೂ ನಡೆಯುತ್ತಿದೆ ಎಂಬುದು ಅವನಿಗೆ ತಿಳಿಯಲಿಲ್ಲ. ತಾನು ದರ್ಶನ ಕಾಣುತ್ತಿರುವೆನೋ ಎಂದು ಭಾವಿಸಿದನು. 10 ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು.
11 ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, "ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ," ಎಂದುಕೊಂಡನು.
12 ಅವನು ಇದನ್ನು ಗ್ರಹಿಸಿ, ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕರು ಒಟ್ಟಾಗಿ ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು.