Pular para o conteúdo
Publicidade

ಅಪೊಸ್ತಲರ ಕೃತ್ಯಗಳು 18:1-11

ಕೊರಿಂಥದಲ್ಲಿ

1 ಇದಾದನಂತರ, ಪೌಲನು ಅಥೇನೆಯನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು. 2 ಅಲ್ಲಿ ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅವನು ಪೊಂತ ಎಂಬ ಊರಿನ ನಿವಾಸಿ. ಎಲ್ಲಾ ಯೆಹೂದ್ಯರು ರೋಮ್ ಪಟ್ಟಣ ಬಿಟ್ಟು ಹೊರಟುಹೋಗಬೇಕೆಂದು ಚಕ್ರವರ್ತಿ ಕ್ಲೌದ್ಯನು ಆಜ್ಞೆ ಹೊರಡಿಸಿದ್ದರಿಂದ, ಅವನು ತನ್ನ ಹೆಂಡತಿ ಪ್ರಿಸ್ಕಿಲ್ಲಳೊಂದಿಗೆ ಇತ್ತೀಚೆಗೆ ಇಟಲಿಯನ್ನು ಬಿಟ್ಟು ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. 3 ಅವರು ತನ್ನಂತೆಯೇ ಗುಡಾರಮಾಡುವ ಕೆಲಸದವರಾದ್ದರಿಂದ ಪೌಲನು ಅವರೊಂದಿಗಿದ್ದು ಅವರೊಂದಿಗೆ ಗುಡಾರ ಕೆಲಸ ಮಾಡುತ್ತಿದ್ದನು. 4 ಪ್ರತಿ ಸಬ್ಬತ್ ದಿನ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರನ್ನೂ ಗ್ರೀಕರನ್ನೂ ವಿಶ್ವಾಸಿಗಳನ್ನಾಗಿಸಲು ಪ್ರೇರೇಪಿಸುತ್ತಿದ್ದನು.

5 ಮಕೆದೋನ್ಯದಿಂದ ಸೀಲ ಮತ್ತು ತಿಮೊಥೆ ಬಂದ ತರುವಾಯ, ಪೌಲನು ವಾಕ್ಯವನ್ನು ಬೋಧಿಸುವುದರಲ್ಲಿಯೇ ಸಮರ್ಪಿಸಿಕೊಂಡವನಾಗಿ ಯೇಸುವೇ ಕ್ರಿಸ್ತ ಎಂದು ಯೆಹೂದ್ಯರಿಗೆ ಖಚಿತವಾಗಿ ಸಾಕ್ಷಿಕೊಟ್ಟನು. 6 ಆದರೆ ಯೆಹೂದ್ಯರು ಪೌಲನನ್ನು ವಿರೋಧಿಸಿ ದೂಷಿಸಿದಾಗ, ಅವನು ಅವರನ್ನು ಪ್ರತಿಭಟಿಸುವಂತೆ ತನ್ನ ಬಟ್ಟೆಗಳನ್ನು ಝಾಡಿಸಿ, "ನಿಮ್ಮ ರಕ್ತವು ನಿಮ್ಮ ತಲೆಯ ಮೇಲೆ ಇರಲಿ. ನಿಮ್ಮ ವಿನಾಶಕ್ಕೆ ನೀವೇ ಹೊಣೆ. ಅದಕ್ಕೆ ನಾನು ಜವಾಬ್ದಾರನಲ್ಲ, ಇಂದಿನಿಂದ ನಾನು ಶುದ್ಧಮನಸ್ಸುಳ್ಳವನಾಗಿ ಯೆಹೂದ್ಯರಲ್ಲದವರ ಬಳಿಗೆ ಹೋಗುತ್ತೇನೆ," ಎಂದನು.

7 ಆಮೇಲೆ ಪೌಲನು ಸಭಾಮಂದಿರವನ್ನು ಬಿಟ್ಟು ಹೊರಗೆ ಬಂದು ಪಕ್ಕದಲ್ಲಿಯೇ ಇದ್ದ ದೇವಭಕ್ತನಾದ ತೀತಯುಸ್ತ ಎಂಬುವನ ಮನೆಗೆ ಹೋದನು. 8 ಸಭಾಮಂದಿರದ ನಾಯಕ ಕ್ರಿಸ್ಪ ಎಂಬುವನು ತನ್ನ ಮನೆಯವರೆಲ್ಲರೊಂದಿಗೆ ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಟ್ಟನು. ಪೌಲನ ಬೋಧನೆ ಕೇಳಿದ ಕೊರಿಂಥದವರಲ್ಲಿ ಇನ್ನೂ ಅನೇಕರು ವಿಶ್ವಾಸವನ್ನಿಟ್ಟು ದೀಕ್ಷಾಸ್ನಾನ ಪಡೆದುಕೊಂಡರು.

9 ಒಂದು ರಾತ್ರಿ ಕರ್ತ ಯೇಸು ದರ್ಶನದಲ್ಲಿ ಪೌಲನೊಂದಿಗೆ ಮಾತನಾಡಿ: "ಭಯಪಡಬೇಡ, ಮಾತನಾಡುತ್ತಲೇ ಇರು, ಸುಮ್ಮನಿರಬೇಡ. 10 ನಾನೇ ನಿನ್ನೊಂದಿಗಿದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ನಿನಗೆ ಕೇಡನ್ನುಂಟುಮಾಡುವುದಿಲ್ಲ. ಏಕೆಂದರೆ ನನಗಾಗಿ ಈ ಪಟ್ಟಣದಲ್ಲಿ ಅನೇಕ ಜನರಿದ್ದಾರೆ," ಎಂದರು. 11 ಆದ್ದರಿಂದ ಪೌಲನು ಅಲ್ಲಿ ಒಂದೂವರೆ ವರ್ಷವಿದ್ದು ಅವರಿಗೆ ದೇವರ ವಾಕ್ಯವನ್ನು ಬೋಧಿಸಿದನು.

Estes versículos te tocaram? Ore agora!

+581 estão orando agora.

Junte-se à corrente de oração.