ಕನಸು ನೆರವೇರಿತು
28 ಅರಸನಾದ ನೆಬೂಕದ್ನೆಚ್ಚರನಿಗೆ ಇದೆಲ್ಲವೂ ಸಂಭವಿಸಿತು. 29 ಹನ್ನೆರಡು ತಿಂಗಳಾದ ಮೇಲೆ ಅರಸನು ಬಾಬಿಲೋನಿನ ರಾಜ್ಯದ ಅರಮನೆಯ ಮೇಲ್ಗಡೆ ತಿರುಗಾಡಿದನು. 30 ಆಗ ಅರಸನು, "ನಾನು ನನ್ನ ಪರಾಕ್ರಮದ ಬಲದಿಂದಲೂ, ನನ್ನ ಮಹಿಮೆಯ ಕೀರ್ತಿಗಾಗಿಯೂ ಕಟ್ಟಿಸಿದ ಮಹಾ ಬಾಬಿಲೋನು ಇದಲ್ಲವೇ?" ಎಂದನು.
31 ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಧ್ವನಿ ಉಂಟಾಯಿತು: "ಅರಸನಾದ ನೆಬೂಕದ್ನೆಚ್ಚರನೇ, ನಿನ್ನ ವಿಷಯವಾದ ದೈವೋಕ್ತಿ ಏನೆಂದರೆ: ನಿನ್ನ ರಾಜ್ಯವು ನಿನ್ನಿಂದ ತೆಗೆಯಲಾಗುವುದು. 32 ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ನೀನು ದನಗಳ ಹಾಗೆ ಹುಲ್ಲನ್ನು ಮೇಯುವೆ. ಮಹೋನ್ನತರು ಮನುಷ್ಯರ ರಾಜ್ಯವನ್ನಾಳುವರೆಂದು ತಮ್ಮ ಮನಸ್ಸಿಗೆ ಸರಿ ಬಂದವರಿಗೆ ಅದನ್ನು ಕೊಡುವೆರೆಂದು ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವುವು," ಎಂಬುದೇ.
33 ಆ ನುಡಿ ಕೂಡಲೆ ನೆರವೇರಿತು. ನೆಬೂಕದ್ನೆಚ್ಚರನು ಸಮಾಜದಿಂದ ಬಹಿಷ್ಕೃತನಾದನು. ದನಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ, ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೆ ಬೆಳೆಯುವವರೆಗೆ ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು.
34 ಆ ಸಮಯದ ಅಂತ್ಯದಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ಎತ್ತಿದೆನು. ನನ್ನ ತಿಳುವಳಿಕೆ ನನಗೆ ತಿರುಗಿ ಬಂತು. ಆಗ ನಾನು ಮಹೋನ್ನತರನ್ನು ಕೊಂಡಾಡಿದೆನು. ಸದಾಕಾಲಕ್ಕೂ ಇರುವವರಾದ ಅವರನ್ನು ಗೌರವಿಸಿ, ಮಹಿಮೆ ಪಡಿಸಿದೆನು.
ಅವರ ಆಡಳಿತವು ನಿತ್ಯವಾದ ಆಡಳಿತವಾಗಿದೆ.
ಅವರ ರಾಜ್ಯವು ತಲತಲಾಂತರಕ್ಕೂ ಇರುವುದು.
35 ದೇವರ ದೃಷ್ಟಿಯಲ್ಲಿ ಭೂನಿವಾಸಿಗಳೆಲ್ಲರೂ
ಯಾವ ಮಹತ್ವವಿಲ್ಲದೆ ಶೂನ್ಯರಾಗಿದ್ದಾರೆ.
ದೇವರು ಪರಲೋಕದ ಸೈನ್ಯದಲ್ಲಿಯೂ,
ಭೂನಿವಾಸಿಗಳಲ್ಲಿಯೂ ತಮ್ಮ ಚಿತ್ತದ ಪ್ರಕಾರವೇ ಮಾಡುತ್ತಾರೆ.
ಯಾರೂ ಅವರ ಹಸ್ತವನ್ನು ಹಿಂತೆಗೆಯಲಾರರು.
"ನೀವು ಏನು ಮಾಡುತ್ತಿರುವಿರಿ?"
ಎಂದು ದೇವರನ್ನು ಯಾರೂ ಕೇಳಲಾರರು.
36 ಇದೇ ಸಮಯದಲ್ಲಿ ನನ್ನ ಬುದ್ಧಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ, ನನ್ನ ತೇಜಸ್ಸೂ ತಿರುಗಿ ಬಂದವು. ನನ್ನ ಆಲೋಚನಾಗಾರರೂ, ನನ್ನ ಪ್ರಭುಗಳೂ ನನ್ನನ್ನು ಹುಡುಕಿ ಬಂದರು. ನಾನು ನನ್ನ ರಾಜ್ಯದಲ್ಲಿ ಪುನಃ ನೆಲೆಗೊಂಡೆನು. ಮೊದಲಿಗಿಂತಲೂ ನನಗೆ ಹೆಚ್ಚಿನ ಪ್ರತಿಭೆ ದೊರೆಯಿತು. 37 ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸರನ್ನು ಸ್ತುತಿಸಿ, ಹೆಚ್ಚಿಸಿ ಘನಪಡಿಸುತ್ತೇನೆ. ಅವರ ಕ್ರಿಯೆಗಳೆಲ್ಲಾ ಸತ್ಯವೇ. ಅವರ ಮಾರ್ಗಗಳು ನ್ಯಾಯವೇ. ಗರ್ವದಲ್ಲಿ ನಡೆಯುವವರನ್ನು ಅವರೇ ತಗ್ಗಿಸಬಲ್ಲರು.