ಪ್ರತಿಯೊಂದು ಕಾರ್ಯಕ್ಕೆ ಸಮಯ
1 ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ.
ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ.
2 ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ.
ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕುವುದಕ್ಕೆ ಒಂದು ಸಮಯ.
3 ಕೊಲ್ಲುವುದಕ್ಕೆ ಒಂದು ಸಮಯ, ಸ್ವಸ್ಥ ಮಾಡುವುದಕ್ಕೆ ಒಂದು ಸಮಯ,
ಕೆಡವಿಬಿಡುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ.
4 ಅಳುವುದಕ್ಕೆ ಒಂದು ಸಮಯ, ನಗುವುದಕ್ಕೆ ಒಂದು ಸಮಯ.
ಗೋಳಾಡುವುದಕ್ಕೆ ಒಂದು ಸಮಯ, ಕುಣಿದಾಡುವುದಕ್ಕೆ ಒಂದು ಸಮಯ.
5 ಕಲ್ಲುಗಳನ್ನು ಎಸೆಯುವುದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸುವುದಕ್ಕೆ ಒಂದು ಸಮಯ.
ಅಪ್ಪಿಕೊಳ್ಳುವುದಕ್ಕೆ ಒಂದು ಸಮಯ, ತಡೆದಿರುವುದಕ್ಕೂ ಒಂದು ಸಮಯ.
6 ಗಳಿಸುವುದಕ್ಕೆ ಒಂದು ಸಮಯ, ಕಳೆದುಕೊಳ್ಳುವುದಕ್ಕೆ ಒಂದು ಸಮಯ.
ಕಾಪಾಡುವುದಕ್ಕೆ ಒಂದು ಸಮಯ, ಬಿಸಾಡುವುದಕ್ಕೆ ಒಂದು ಸಮಯ.
7 ಹರಿಯುವುದಕ್ಕೆ ಒಂದು ಸಮಯ, ಹೊಲಿಯುವುದಕ್ಕೆ ಒಂದು ಸಮಯ.
ಸುಮ್ಮನೆ ಇರುವುದಕ್ಕೆ ಒಂದು ಸಮಯ, ಮಾತಾಡುವುದಕ್ಕೆ ಒಂದು ಸಮಯ.
8 ಪ್ರೀತಿಸುವುದಕ್ಕೆ ಒಂದು ಸಮಯ, ದ್ವೇಷಿಸುವುದಕ್ಕೆ ಒಂದು ಸಮಯ.
ಯುದ್ಧದ ಸಮಯ, ಸಮಾಧಾನದ ಸಮಯ, ಹೀಗೆ ಒಂದೊಂದಕ್ಕೂ ತಕ್ಕ ಸಮಯವಿದೆ.