ಕೃತಜ್ಞತೆ ಮತ್ತು ಪ್ರಾರ್ಥನೆ
15 ಈ ಕಾರಣದಿಂದ ನಾನು ಸಹ ಕರ್ತ ಯೇಸುವಿನಲ್ಲಿರುವ ನಿಮ್ಮ ನಂಬಿಕೆ ಹಾಗೂ ಪರಿಶುದ್ಧರೆಲ್ಲರಿಗಾಗಿರುವ ಪ್ರೀತಿಯನ್ನು ಕುರಿತು ಕೇಳಿ, 16 ನನ್ನ ಪ್ರಾರ್ಥನೆಗಳಲ್ಲಿ ನಿಮಗಾಗಿ ವಿಜ್ಞಾಪಿಸಿ, ನಿಮ್ಮ ನಿಮಿತ್ತವಾಗಿ ಎಡಬಿಡದೆ ಸ್ತೋತ್ರ ಮಾಡುತ್ತೇನೆ. 17 ನಮ್ಮ ಕರ್ತ ಯೇಸುಕ್ರಿಸ್ತರ ದೇವರೂ ಮಹಿಮೆಯ ತಂದೆಯಾದವರನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳುವಂತೆ ಜ್ಞಾನದ ಮತ್ತು ಪ್ರಕಟಣೆಯ ಆತ್ಮವನ್ನು ನಿಮಗೆ ಅನುಗ್ರಹಿಸಲಿ ಎಂದು ನಿಮಗಾಗಿ ಯಾವಾಗಲೂ ಪ್ರಾರ್ಥನೆ ಮಾಡುವವನಾಗಿದ್ದೇನೆ. 18 ದೇವರು ನಿಮ್ಮ ಮನೋನೇತ್ರಗಳನ್ನು ಬೆಳಗಿಸಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಆಗ ಮಾತ್ರವೇ ನೀವು ದೇವರ ಕರೆಯ ನಿರೀಕ್ಷೆಯನ್ನೂ, ಪರಿಶುದ್ಧರಲ್ಲಿ ಅವರಿಗಿರುವ ವಾರಸುತನದ ಮಹಿಮೆಯನ್ನೂ ನೀವು ತಿಳಿದುಕೊಳ್ಳುವಿರಿ. 19 ಮಾತ್ರವಲ್ಲದೆ ನಂಬುವವರಾದ ನಮಗಾಗಿರುವ ಹೋಲಿಸಲಾಗದ ದೇವರ ಮಹಾಶಕ್ತಿಯನ್ನೂ ನೀವು ತಿಳಿಯುವಂತೆ ಪ್ರಾರ್ಥನೆ ಮಾಡುವವನಾಗಿದ್ದೇನೆ. 20 ಈ ಮಹಾಶಕ್ತಿಯನ್ನು ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ, 21 ಸಕಲ ರಾಜತ್ವ, ಅಧಿಕಾರ, ಶಕ್ತಿ, ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿಯೂ ಸಹ, ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೋಕದಲ್ಲಿ ಕ್ರಿಸ್ತರನ್ನು ತಮ್ಮ ಬಲಗಡೆಯಲ್ಲಿ ಕೂರಿಸಿಕೊಂಡರು. 22 ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಅಧೀನಮಾಡಿ, ಅವರನ್ನು ಎಲ್ಲದರ ಮೇಲೆ ಶಿರಸ್ಸಾಗಿರಲು ಸಭೆಗೋಸ್ಕರ ನೇಮಿಸಿದ್ದಾರೆ. 23 ಎಲ್ಲವನ್ನು ಎಲ್ಲಾ ವಿಧದಲ್ಲಿಯೂ ತುಂಬಿಸುವ ದೇವರಿಂದ ಕ್ರಿಸ್ತನ ದೇಹವಾಗಿರುವ ಸಭೆಯು ಪರಿಪೂರ್ಣ ಉಳ್ಳದ್ದಾಗಿದೆ.